
ದೆಹಲಿ ಹಾಗೂ ವಾಯುವ್ಯ ಮತ್ತು ಉತ್ತರ ಭಾರತದ ರಾಜ್ಯಗಳು ಬೆಳಗಿನ ಸಮಯದಲ್ಲಿ ದಟ್ಟವಾದ ಮಂಜಿನಿಂದ ಆವೃತವಾಗಿವೆ. ದಟ್ಟವಾದ ಮಂಜು ಹಾಗೂ ವಾಯು ಮಾಲಿನ್ಯದಿಂದಾಗಿ ದೆಹಲಿಯಲ್ಲಿ ಜನರ ಸ್ಥಿತಿ ಹದಗೆಟ್ಟಿದೆ. ಮತ್ತೊಂದೆಡೆ ಬಂಗಾಳಕೊಲ್ಲಿಯಲ್ಲಿ ಚಂಡಮಾರುತದ ಪರಿಚಲನೆಯಿಂದಾಗಿ ಕೆಲ ರಾಜ್ಯಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ದೆಹಲಿಯಲ್ಲಿ ಗಾಳಿಯ ವಿಷವರ್ತುಲ ಮುಂದುವರಿದಿದ್ದು, ಮಾಲಿನ್ಯಕಾರಕ ಗಾಳಿ ಸೇವಿಸಿ ಜನರು ಅನಾರೋಗ್ಯಕ್ಕೆ ಈಡಾಗುತ್ತಿದ್ದಾರೆ. ಗುರುವಾರ, ದೆಹಲಿಯ UI 400 ಕ್ಕಿಂತ ಹೆಚ್ಚು ದಾಖಲಾಗಿದೆ. ಕಳೆದ 24 ಗಂಟೆಗಳಲ್ಲಿ ದೆಹಲಿಯ ತಾಪಮಾನದಲ್ಲಿ ಕುಸಿತ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದೆಹಲಿಯಲ್ಲಿ ಮಂಜು ಕವಿದ ವಾತಾವರಣ ಇದ್ದರೂ ಗಾಳಿ ಮಾತ್ರ ವಿಷ ಉಗುಳುತ್ತಿದೆ.

ಉತ್ತರ ಭಾರತದಾದ್ಯಂತ ದಟ್ಟವಾದ ಮಂಜಿನ ಎಚ್ಚರಿಕೆಯನ್ನು ನೀಡಲಾಗಿದೆ. ಹವಾಮಾನ ಇಲಾಖೆ ಪ್ರಕಾರ, ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ರಾತ್ರಿ ಮತ್ತು ಮುಂಜಾನೆ ದಟ್ಟವಾದ ಮತ್ತು ಅತ್ಯಂತ ದಟ್ಟವಾದ ಮಂಜು ಇರುವ ಸಾಧ್ಯತೆಯಿದೆ. ಪಂಜಾಬ್, ಹರಿಯಾಣ, ಚಂಡೀಗಢ ಮತ್ತು ಪಶ್ಚಿಮ ರಾಜಸ್ಥಾನದಲ್ಲಿ ದಟ್ಟವಾದ ಮಂಜಿನಿಂದಾಗಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಅದೇ ಸಮಯದಲ್ಲಿ, ಹಿಮಾಚಲ ಪ್ರದೇಶ, ಉತ್ತರಾಖಂಡ, ಉತ್ತರ ಪ್ರದೇಶ, ಉಪ ಹಿಮಾಲಯ ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂ, ಬಿಹಾರ ಮತ್ತು ಜಾರ್ಖಂಡ್‌ನಲ್ಲಿ ಬೆಳಿಗ್ಗೆ ದಟ್ಟವಾದ ಮಂಜು ಕಾಣಿಸಿಕೊಳ್ಳುತ್ತಿರುವುದರಿಂದ ಜನರು ಎಚ್ಚರದಿಂದ ಇರುವಂತೆ ಸೂಚಿಸಲಾಗಿದ್ದು, ಆ ರಾಜ್ಯಗಳಲ್ಲಿ ಯೆಲ್ಲೋ ಅಲರ್ಟ್ ನೀಡಲಾಗಿದೆ.
ದೆಹಲಿ ಎನ್‌ಸಿಆರ್ ಸೇರಿದಂತೆ ದೇಶದ ಉತ್ತರ ಭಾಗದಲ್ಲಿ ತಾಪಮಾನದಲ್ಲಿ ಕುಸಿತ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದೆಹಲಿಯಲ್ಲಿ ಹೊಗೆ ಆವರಿಸಿದ್ದರಿಂದ ವಾತಾವರಣ ಬೆಚ್ಚಗಿತ್ತು. ಇದೇ ವೇಳೆ ಗುರುವಾರ ದಟ್ಟ ಮಂಜಿನಿಂದಾಗಿ ಗೋಚರತೆಯೂ ಕಡಿಮೆಯಾಗಿತ್ತು.
ಮುಂದಿನ 24 ಗಂಟೆಗಳಲ್ಲಿ ತಮಿಳುನಾಡು, ಕೇರಳ ಮತ್ತು ಆಂಧ್ರಪ್ರದೇಶದ ಕರಾವಳಿಯಲ್ಲಿ ಕೆಲವೆಡೆ ಭಾರೀ ಮಳೆಯೊಂದಿಗೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಆಂಧ್ರಪ್ರದೇಶ, ಕರ್ನಾಟಕ, ಲಕ್ಷದ್ವೀಪ ಮತ್ತು ದಕ್ಷಿಣ ತೆಲಂಗಾಣದಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ .




