
ಬೆಂಗಳೂರು: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಬೆಂಗಳೂರಿನಲ್ಲಿ ಎಫ್‌ಐಆರ್ ದಾಖಲಾಗುತ್ತಿದೆ. ಚುನಾವಣಾ ಬಾಂಡ್‌ಗಳ ಮೂಲಕ ಹಣ ಸುಲಿಗೆ ಆರೋಪಿಸಿ ಕೋರ್ಟ್‌ಗೆ ಆರ್ಜಿ ಸಲ್ಲಿಸಲಾಗಿದ್ದು, FIR ದಾಖಲಿಸಲು ಜನಪ್ರತಿನಿಧಿಗಳ ಕೋರ್ಟ್ ಸಮ್ಮತಿ ನೀಡಿದೆ.
ಐಪಿಸಿ ಸೆಕ್ಷನ್ 156(3), 383, 120(ಬಿ) ಅಡಿ ಎಫ್‌ಐಆರ್ ದಾಖಲು ಮಾಡಲು ಕೋರ್ಟ್ ಆದೇಶ ನೀಡಿದ್ದು, ಬೆಂಗಳೂರಿನ ತಿಲಕ್‌ನಗರ ಪೊಲೀಸರಿಗೆ ನ್ಯಾಯಾಲಯ ಆದೇಶ ನೀಡಿದೆ. ಆದರ್ಶ್ ಅಯ್ಯರ್ ಅವರು ಜನಾಧಿಕಾರ ಸಂಘರ್ಷ ಪರಿಷತ್ (ಜೆಎಸ್‌ಪಿ)ನ ಸಹ ಅಧ್ಯಕ್ಷರಾಗಿದ್ದು, ಎಲೆಕ್ಟೋರಲ್ ಬಾಂಡ್ ಮೂಲಕ ಬೆದರಿಸಿ ಸುಲಿಗೆ ಮಾಡಲಾಗುತ್ತಿದೆ ಅರ್ಜಿಯಲ್ಲಿ ಆರೋಪಿಸಿದ್ದರು.
ಚುನಾವಣಾ ಬಾಂಡ್‌ಗಳ ಮೂಲಕ ಸುಲಿಗೆ ಮಾಡಲಾಗಿದೆ. ಹೀಗಾಗಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ನಳಿನ್ ಕುಮಾರ್ ಕಟೀಲು, ಬಿ.ವೈ.ವಿಜಯೇಂದ್ರ ವಿರುದ್ಧ ಜನಾಧಿಕಾರಿ ಸಂಘರ್ಷ ಪರಿಷತ್‌ನ(ಜೆಎಸ್‌ಪಿ) ಆದರ್ಶ ಆರ್. ಐಯ್ಯರ್ ಅವರು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು. ಈ ದೂರು ಸಂಬಂಧ ವಿಚಾರಣೆ ನಡೆಸಿದ 42ನೇ ಎಸಿಎಂಎಂ ಕೋರ್ಟ್, ದೂರಿನ ಪ್ರತಿ & ದಾಖಲೆ ಠಾಣೆಗೆ ಕಳುಹಿಸಲು ಸೂಚಿಸಿ ಆದೇಶ ಹೊರಡಿಸಿದೆ. ಬೆಂಗಳೂರಿನ ತಿಲಕ್‌ನಗರ ಠಾಣೆಗೆ ಕಳಿಸುವಂತೆ ಕೋರ್ಟ್ನ ಕಚೇರಿಗೆ 42ನೇ ಎಸಿಎಂಎಂ ಜಡ್ಜ್ ಸೂಚನೆ ನೀಡಿದ್ದಾರೆ. FIR ನಿರೀಕ್ಷೆಯಲ್ಲಿ ಎಂದು ವಿಚಾರಣೆ ಅ.10ಕ್ಕೆ ಮುಂದೂಡಲಾಗಿದೆ.




