Top Newsಸುದ್ದಿ

ಬಿಎಂಟಿಸಿ ಎಲೆಕ್ಟ್ರಿಕ್ ಬಸ್​ಗಳಿಗೆ ಕೇರಳದ ಮಲಯಾಳಿ ಹುಡುಗರೀಗ ಚಾಲಕರು!

ಬೆಂಗಳೂರು: ಬೆಂಗಳೂರಿನ ಸರ್ಕಾರಿ ಸಾರಿಗೆ ಸಂಸ್ಥೆ ಬಿಎಂಟಿಸಿ  ಎಲೆಕ್ಟ್ರಿಕ್ ಬಸ್​​ಗಳಿಗೆ  ಗುತ್ತಿಗೆ ಆಧಾರದಲ್ಲಿ ಕನ್ನಡ ಬರದ ಮತ್ತು ಅನುಭವವೇ ಇಲ್ಲದ ಕೇರಳದ ಸಣ್ಣಪುಟ್ಟ ಹುಡುಗರನ್ನು ಚಾಲಕರನ್ನಾಗಿ ನೇಮಕ ಮಾಡಿದೆ ಎಂಬ ಆರೋಪ ಕೇಳಿ ಬಂದಿದೆ. ಬಿಎಂಟಿಸಿಯಲ್ಲಿ ಸುಮಾರು ಆರು ಸಾವಿರಕ್ಕೂ ಹೆಚ್ಚು ಬಸ್​ಗಳಿವೆ. 648 ಬಸ್ಸುಗಳನ್ನು ಗುತ್ತಿಗೆ ಆಧಾರದಲ್ಲಿ ಮೂರು ಕಂಪನಿಗಳಿಂದ ತೆಗೆದುಕೊಳ್ಳಲಾಗಿದೆ. ಆ ಬಸ್​ಗಳಿಗೆ ಕಂಡಕ್ಟರ್​​ಗಳು ಬಿಎಂಟಿಸಿಯಿಂದ, ಚಾಲಕರನ್ನು ಮಾತ್ರ ಖಾಸಗಿ ಕಂಪನಿಗಳಿಂದ ತೆಗೆದುಕೊಳ್ಳಲಾಗಿದೆ. ಆದರೆ ಒಂದು ‌ಕಂಪನಿ ಮಾತ್ರ ಚಾಲಕರಿಗೆ 22500 ರೂ. ಹಾಗೂ ವಸತಿ ವ್ಯವಸ್ಥೆ ಮಾಡುತ್ತೇವೆ ಎಂದು ಕೆಲಸಕ್ಕೆ ತೆಗೆದುಕೊಂಡು ಈಗ 18 ಸಾವಿರ ರೂಪಾಯಿ ಮಾತ್ರ ನೀಡುತ್ತಿದೆ ಎನ್ನಲಾಗಿದೆ.

ಈ ಎಲ್ಲ ಕಾರಣಗಳಿಂದ ಚಾಲಕರು ಸರಿಯಾಗಿ ಕೆಲಸಕ್ಕೆ ಬರುತ್ತಿಲ್ಲ ಈಗಾಗಲೇ ತುಂಬಾ ಚಾಲಕರು ಕೆಲಸ ಬಿಟ್ಟು ಹೋಗಿದ್ದಾರೆ. ಹೀಗಾಗಿ ಕನ್ನಡಿಗರಿಗೆ ಸಮರ್ಪಕ ವೇತನ ಕೊಡದೆ ಕಡಿಮೆ ಸಂಬಳಕ್ಕೆ ಮಲಯಾಳಿ ಚಾಲಕರನ್ನು ನೇಮಕ ಮಾಡಲಾಗುತ್ತಿದೆ. ಬಿಎಂಟಿಸಿಯ ಕಂಡಕ್ಟರ್​​ಗಳಿಗೆ ಮಲೆಯಾಳಂ ಬರುವುದಿಲ್ಲ, ಕೇರಳದ ಮಲೆಯಾಳಿ ಡ್ರೈವರ್ ಗಳಿಗೆ ಕನ್ನಡ ಬರುವುದಿಲ್ಲ. ಇದು ಕಂಡಕ್ಟರ್​​ಗಳ ತಲೆನೋವಿಗೆ ಕಾರಣವಾಗಿದೆ. ಬಿಎಂಟಿಸಿಯ ಅಧಿಕಾರಿಗಳ ಕಮಿಷನ್ ಆಸೆಗೆ ಕಂಡಕ್ಟರ್​​ಗಳು ಹಾಗೂ ಪ್ರಯಾಣಿಕರು ಸಂಕಷ್ಟಕ್ಕೀಡಾಗುವಂತಾಗಿದೆ.

ಅನನುಭವಿ ಎಲೆಕ್ಟ್ರಿಕ್ ಬಸ್ ಚಾಲಕರಿಂದ ಸಾಕಷ್ಟು ಅಪಘಾತಗಳೂ ಆಗುತ್ತಿವೆ. ಇದರಿಂದ ಬಿಎಂಟಿಸಿಗೆ ಕೆಟ್ಟ ಹೆಸರು ಎಂದು ಕಂಡಕ್ಟರ್​​ಗಳು ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಎರಡು ವಾರಗಳ ಹಿಂದಷ್ಟೇ, ಸರಿಯಾಗಿ ಸಂಬಳ ನೀಡಿಲ್ಲ ಎಂದು ಬಿಎಂಟಿಸಿಯ ಎಲೆಕ್ಟ್ರಿಕ್ ಬಸ್​​ಗಳನ್ನು ನಿಲ್ಲಿಸಿ ಚಾಲಕರು ಮುಷ್ಕರ ಮಾಡಿದ್ದರು. ಈಗ ಎಲೆಕ್ಟ್ರಿಕ್ ಬಸ್ ಕಂಪನಿಗಳು ಹದಿನೈದು ಸಾವಿರ ಸಂಬಳಕ್ಕೆ ಕೇರಳದ ಯುವಕರನ್ನು ಕರೆದುಕೊಂಡು ಬಂದು ಎಲೆಕ್ಟ್ರಿಕ್ ಬಸ್​​ಗಳ ಚಾಲನೆಯ ಹೊಣೆ ನೀಡಿವೆ. ಇತ್ತ ಬಿಎಂಟಿಸಿಯಲ್ಲಿ ಚಾಲಕರಾಗಬೇಕು ಎಂದರೆ ನಿಯಮ ಪ್ರಕಾರ ಎಸ್ಎಸ್ಎಲ್ಸಿ ಪಾಸ್ ಆಗಿರಬೇಕು. ಹೆವಿ ಡ್ರೈವಿಂಗ್ ಲೈಸನ್ಸ್ ಇರಬೇಕು ಮತ್ತು ಎರಡು ವರ್ಷ ಅನುಭವ ಇರಬೇಕು. ಆದರೆ ಖಾಸಗಿ ಎಲೆಕ್ಟ್ರಿಕ್ ಬಸ್ ಕಂಪನಿಗಳು ನಿಯಮ ಉಲ್ಲಂಘಿಸಿ ಅನುಭವವೇ ಇಲ್ಲದ ಸಣ್ಣಪುಟ್ಟ ಹುಡುಗರನ್ನು ನೇಮಕ ಮಾಡಿಕೊಳ್ಳುತ್ತಿದೆ.
ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com

Comments (0)

Your email address will not be published. Required fields are marked *

Back to top button