bengaluru

ಖಾಸಗಿ ಬಸ್​​ ಪ್ರಯಾಣ​​ ದರ ಹೆಚ್ಚಳ-ಜನಸಾಮಾನ್ಯರಿಗೆ ದೇವರೇ ದಿಕ್ಕು!

Private bus ticket rate hike

ಬೆಂಗಳೂರು: ಈಗಾಗಲೇ ಪೆಟ್ರೋಲ್, ಡೀಸೆಲ್ ಹಾಗೂ ದಿನಸಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದ ಕಂಗಾಲಾಗಿರುವ ಸಾರ್ವಜನಿಕರಿಗೆ ಖಾಸಗಿ ಬಸ್ ಗಳಲ್ಲಿ ಟಿಕೆಟ್ ಹೆಚ್ಚಳ ಮಾಡಿರುವುದಕ್ಕೆ ಅವಾಕ್ ಆಗಿದ್ದಾರೆ. ಬೆಳಗ್ಗೆಯಿಂದ ಜಾರಿಗೆ ಬರುವಂತೆ ಇಂಧನ ದರದಲ್ಲಿ ಪ್ರತಿ ಲೀಟರ್‌ಗೆ 3 ರೂಪಾಯಿ ಹೆಚ್ಚಳವಾದ ಹಿನ್ನೆಲೆಯಲ್ಲಿ, ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ಖಾಸಗಿ ಬಸ್ ಟಿಕೆಟ್ ದರವನ್ನು ಏರಿಕೆ ಮಾಡಲು ನಿರ್ಧರಿಸಲಾಗಿದೆ.

ಖಾಸಗಿ ಟಿಕೆಟ್ ದರ ಶೇ. 20 ರಿಂದ ಶೇ. 30 ರಷ್ಟು ಏರಿಕೆ!

ಖಾಸಗಿ ಬಸ್ ಮಾಲೀಕರ ಸಂಘದ ಮಾಹಿತಿ ಪ್ರಕಾರ, ಬಸ್ ಪ್ರಯಾಣ ದರದಲ್ಲಿ ಶೇ. 20 ರಿಂದ ಶೇ. 30 ರಷ್ಟು ಭಾರಿ ಏರಿಕೆಯಾಗಲಿದೆ. ದೂರದ ಊರುಗಳಿಗೆ ಸಂಚರಿಸುವ ಪ್ರಯಾಣಿಕರ ಜೇಬಿಗೆ ಇದು ನೇರವಾಗಿ ಕತ್ತರಿ ಹಾಕಲಿದೆ.ದರ ಏರಿಕೆಯನ್ನು ಸಮರ್ಥಿಸಿಕೊಂಡಿರುವ ಕರ್ನಾಟಕ ರಾಜ್ಯ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷರಾದ ನಟರಾಜ್ ಶರ್ಮಾ, ತಮಗಾಗುತ್ತಿರುವ ನಷ್ಟದ ಲೆಕ್ಕಾಚಾರವನ್ನು ಬಿಚ್ಚಿಟ್ಟಿದ್ದಾರೆ.


ದೈನಂದಿನ ಇಂಧನ ವೆಚ್ಚ- “ಪ್ರತಿಯೊಂದು ಖಾಸಗಿ ಬಸ್‌ಗೆ ಪ್ರತಿದಿನ ಕನಿಷ್ಠ 150 ಲೀಟರ್ ಡೀಸೆಲ್ ಹಾಕಿಸಬೇಕಾಗುತ್ತದೆ.” “ಡೀಸೆಲ್ ಬೆಲೆಯಲ್ಲಿ 3 ರೂ. ಹೆಚ್ಚಳವಾಗಿರುವುದರಿಂದ, ನಿತ್ಯ ಪ್ರತಿ ಬಸ್‌ಗೆ 450 ರೂಪಾಯಿ ಹೆಚ್ಚುವರಿ ಹೊರೆ ಬೀಳುತ್ತದೆ.” “ಇಡೀ ತಿಂಗಳ ಲೆಕ್ಕಾಚಾರ ಹಾಕಿದರೆ ಬಸ್ ನಿರ್ವಹಣೆ ಕಷ್ಟಸಾಧ್ಯ. ಹೀಗಾಗಿ ಟಿಕೆಟ್ ದರ ಏರಿಸುವುದು ನಮಗೂ ಅನಿವಾರ್ಯವಾಗಿದೆ. ಇದರ ನೇರ ಪರಿಣಾಮ ಪ್ರಯಾಣಿಕರ ಮೇಲೆ ಬೀಳಲಿದೆ” ಎಂದು ಅವರು ತಿಳಿಸಿದ್ದಾರೆ.

ಜನಸಾಮಾನ್ಯರ ಬೆನ್ನ ಮೇಲೆ ಬರೆಗಳ ಸಾಲು!
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೀತಿಗಳಿಂದಾಗಿ ಜನಸಾಮಾನ್ಯರು ಬದುಕು ನಡೆಸುವುದೇ ದುಸ್ತರವಾಗಿದೆ. ಮಾರುಕಟ್ಟೆಯಲ್ಲಿ ಸದ್ಯ ಪೆಟ್ರೋಲ್-ಡೀಸೆಲ್ ಮಾತ್ರವಲ್ಲದೆ, ಚಿನ್ನ-ಬೆಳ್ಳಿ ಹಾಗೂ ನಿತ್ಯಬಳಕೆಯ ಅಕ್ಕಿ, ಬೇಳೆ ಸೇರಿದಂತೆ ಪ್ರತಿಯೊಂದು ವಸ್ತುವಿನ ಬೆಲೆಯೂ ಗಗನಕ್ಕೇರಿದೆ. ಇಂತಹ ಪರಿಸ್ಥಿತಿಯಲ್ಲಿ ಈಗ ಖಾಸಗಿ ಬಸ್ ಟಿಕೆಟ್ ದರವೂ ದುಬಾರಿಯಾಗುತ್ತಿರುವುದು ದಿನನಿತ್ಯ ಸಂಚರಿಸುವ ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಕೊನೆ ಎಂದಯ್ಯಾ ಸರ್ಕಾರಗಳ ಬೆಲೆ ಏರಿಕೆ ಆಟಕ್ಕೆ!
ಒಂದೆಡೆ ಇಂಧನ ದರ ಏರಿಕೆಯಿಂದಾಗಿ ಸಾರಿಗೆ ವೆಚ್ಚ ಹೆಚ್ಚಾಗಿ ಮಾರುಕಟ್ಟೆಯ ಎಲ್ಲ ವಸ್ತುಗಳ ಬೆಲೆ ಏರುತ್ತಿದೆ. ಇನ್ನೊಂದೆಡೆ ಸಾರ್ವಜನಿಕ ಸಾರಿಗೆಯನ್ನು ಆಶ್ರಯಿಸುವ ಜನರಿಗೆ ಪ್ರಯಾಣ ದರವೂ ದುಬಾರಿಯಾಗುತ್ತಿದೆ. ಆಡಳಿತ ನಡೆಸುವ ಸರ್ಕಾರಗಳು ತೆರಿಗೆ ಹಾಗೂ ಸೆಸ್ ಹೆಸರಿನಲ್ಲಿ ಜನರನ್ನು ಲೂಟಿ ಮಾಡುತ್ತಿದ್ದರೆ, ಸಾಮಾನ್ಯ ಪ್ರಜೆಗಳು ಬದುಕುವುದಾದರೂ ಹೇಗೆ?

#BusFareHike #PrivateBusFare #FuelPriceHike #DieselPriceRise #CommonManBurden #InflationKarnataka #NatarajSharma #TravelExpensive #BengaluruNews #FreedomTVNews #BreakingNewsKannada

Comments (0)

Your email address will not be published. Required fields are marked *

Back to top button