ಜಡ್ಜ್ ಮುಂದೆ ವಿನಯ್ ಕುಲಕರ್ಣಿ ಭಾವುಕ ಮನವಿ!

ಧಾರವಾಡದ ಬಿಜೆಪಿ ಮುಖಂಡ ಯೋಗೇಶ್ ಗೌಡ ಹತ್ಯೆ ಪ್ರಕರಣದ ಅಂತಿಮ ಘಟ್ಟಕ್ಕೆ ಕ್ಷಣಗಣನೆ ಶುರುವಾಗಿದ್ದು, ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ ಒಟ್ಟು 17 ಮಂದಿ ಅಪರಾಧಿಗಳಿಗೆ ನಾಳೆ ಶಿಕ್ಷೆಯ ಪ್ರಮಾಣ ಪ್ರಕಟವಾಗಲಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಸಂತೋಷ್ ಗಜಾನನ ಭಟ್ ಪೀಠವು ಇಂದು ಸುದೀರ್ಘ ವಾದ-ಪ್ರತಿವಾದಗಳನ್ನು ಆಲಿಸಿದ ನಂತರ, ಅಂತಿಮ ತೀರ್ಪನ್ನು ನಾಳೆಗೆ ಕಾಯ್ದಿರಿಸಿದೆ. ಶಿಕ್ಷೆಯ ಪ್ರಮಾಣ ಘೋಷಣೆಗೂ ಮುನ್ನ ಇಂದು ನ್ಯಾಯಾಲಯವು ಅಪರಾಧಿಗಳಿಗೆ ತಮ್ಮ ಅಹವಾಲು ಮಂಡಿಸಲು ಅವಕಾಶ ನೀಡಿದ್ದು, ಈ ವೇಳೆ ವಿನಯ್ ಕುಲಕರ್ಣಿ ನ್ಯಾಯಾಧೀಶರ ಮುಂದೆ ಭಾವುಕರಾಗಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಕೋರ್ಟ್ ಕಟಕಟೆಯಲ್ಲಿ ನಿಂತು ಮಾತನಾಡಿದ ವಿನಯ್ ಕುಲಕರ್ಣಿ, ತಾವು ಕಳೆದ 27 ವರ್ಷಗಳಿಂದ ರಾಜಕೀಯ ಜೀವನದಲ್ಲಿದ್ದು, ಈವರೆಗೂ ಯಾರಿಗೂ ಅನ್ಯಾಯ ಮಾಡಿಲ್ಲ ಎಂದು ಪ್ರತಿಪಾದಿಸಿದರು. ಕೇವಲ ರಾಜಕೀಯ ಪ್ರತೀಕಾರಕ್ಕಾಗಿ ತಮ್ಮನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಆರೋಪಿಸಿದ ಅವರು, ತಮ್ಮ ಕುಟುಂಬದ ಜವಾಬ್ದಾರಿಯ ಬಗ್ಗೆಯೂ ನ್ಯಾಯಾಲಯಕ್ಕೆ ವಿವರಿಸಿದರು. ತಮಗೆ ಮೂವರು ಮಕ್ಕಳಿದ್ದು, ಅವರು ಈಗ ವಿವಾಹ ವಯಸ್ಸಿಗೆ ಬಂದಿದ್ದಾರೆ. ಜೊತೆಗೆ ಮನೆಯಲ್ಲಿರುವ 3,500 ಹಸು ಮತ್ತು ಎಮ್ಮೆಗಳನ್ನು ನೋಡಿಕೊಳ್ಳುವ ಜವಾಬ್ದಾರಿಯೂ ನನ್ನ ಮೇಲಿದೆ. ಈ ಪ್ರಕರಣದಿಂದ ನನ್ನ ಕ್ಷೇತ್ರದ ಜನರಿಗೂ ಅನ್ಯಾಯವಾಗುತ್ತಿದೆ ಎಂದು ನ್ಯಾಯಾಧೀಶರ ಮುಂದೆ ಕನಿಷ್ಠ ಶಿಕ್ಷೆಗಾಗಿ ಮನವಿ ಮಾಡಿಕೊಂಡಿದ್ದಾರೆ.
ಯೋಗೇಶ್ ಗೌಡ ಹತ್ಯೆ ಪ್ರಕರಣವು ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿತ್ತು. ಈ ಹತ್ಯೆಯ ಹಿಂದೆ ವಿನಯ್ ಕುಲಕರ್ಣಿ ಕೈವಾಡವಿದೆ ಎಂದು ಸಿಬಿಐ ಆರೋಪಿಸಿತ್ತು. ಸುದೀರ್ಘ ವಿಚಾರಣೆಯ ಬಳಿಕ ನ್ಯಾಯಾಲಯವು ಇವರನ್ನು ದೋಷಿ ಎಂದು ಘೋಷಿಸಿದ್ದು, ನಾಳೆ ಹೊರಬೀಳಲಿರುವ ಶಿಕ್ಷೆಯ ಪ್ರಮಾಣವು ಕುತೂಹಲ ಮೂಡಿಸಿದೆ. ವಿನಯ್ ಕುಲಕರ್ಣಿ ಮನವಿಯನ್ನು ನ್ಯಾಯಾಲಯ ಎಷ್ಟು ಗಂಭೀರವಾಗಿ ಪರಿಗಣಿಸಲಿದೆ ಮತ್ತು ಎಷ್ಟು ವರ್ಷಗಳ ಶಿಕ್ಷೆ ವಿಧಿಸಲಿದೆ ಎಂಬುದು ನಾಳೆ ಮಧ್ಯಾಹ್ನದ ವೇಳೆಗೆ ಸ್ಪಷ್ಟವಾಗಲಿದೆ.




