ಸಿನಿಮಾ

ಬಿಡುಗಡೆಯಾಯ್ತು ಲವ್ ಸೀಸನ್ಸ್ ಟೀಸರ್!

ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಹೊಸಬರ ತಂಡದ ಆಗಮನವಾಗಿದೆ. ತಿಂಗಳ ಹಿಂದಷ್ಟೇ ಚಿತ್ರೀಕರಣ ಮುಗಿಸಿಕೊಂಡು ಒಂದಷ್ಟು ಸುದ್ದಿ ಮಾಡಿದ್ದ ಈ ಸಿನಿಮಾದ ಟೀಸರ್ ನ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡ ಲವ್ ಸೀಸನ್ಸ್ ಆಂತರ್ಯದ ಬಗ್ಗೆ ಒಂದಷ್ಟು ಕುತೂಹಲಕರ ವಿಚಾರಗಳನ್ನು ಅನಾವರಣಗೊಳಿಸಿದೆ.

ರಾಜೇಶ್ ನಟರಂಗ ಈ ಚಿತ್ರದ ಬಹುಮುಖ್ಯ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ. ಈ ಬಗ್ಗೆ ಮಾತಾಡಿರುವ ರಾಜೇಶ್ ಅವರು, ನಿರ್ದೇಶಕರ ಕಸುಬುದಾರಿಕೆಯನ್ನು ಮೆಚ್ಚಿಕೊಳ್ಳುತ್ತಲೇ, ತಾನಿಲ್ಲಿ ಜವಾಬ್ದಾರಿಯುತ ತಂದೆಯ ಪಾತ್ರದಲ್ಲಿ ನಟಿಸಿರುವ ಸುಳಿವನ್ನು ಬಿಟ್ಟು ಕೊಟ್ಟರು. ಪ್ರೀತಿಯೆಂಬುದು ಯಾವ ಕಾಲಕ್ಕೂ ಹಳತಾಗದ ವಿಚಾರ. ಈ ಭೂಮಿಕೆಯಲ್ಲಿಯೇ ರೂಪುಗೊಂಡಿರುವ ಈ ಚಿತ್ರವನ್ನು ಬೆಂಬಲಿಸಿ, ಪ್ರೋತ್ಸಾಹಿಸುವಂತೆ ರಾಜೇಶ್ ನಟರಂಗ ಕೇಳಿಕೊಂಡರು.

ಎನ್.ಆರ್ ಮಂಜುನಾಥ (ನೀಲೇರಿ) ಈ ಚಿತ್ರದ ಮೂಲಕ ನಿರ್ಮಾಪಕರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ರಂಗಭೂಮಿಯಲ್ಲಿ ಪಳಗಿಕೊಂಡು, ಕ್ಷತ್ರಿಯ, ಬುದ್ಧಿವಂತ೨, ಗುರುದೇವ ಹೊಯ್ಸಳ ಮುಂತಾದ ಚಿತ್ರಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿರುವ ಕೃತ್ವಿಕ್ ಲವ್ ಸೀಸನ್ಸ್ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಈ ಚಿತ್ರದ ನಾಯಕ, ರಂಗಭೂಮಿ ಕಲಾವಿದ ಮುಕುಂದ ರಾಮಸ್ವಾಮಿ ಹಾಗೂ ನಾಯಕಿಯರಾದ ದಿಯಾ ಕೀರ್ತಿ ಮತ್ತು ಚಂದನಾ ಗೌಡ ಸಹ ತಂತಮ್ಮ ಪಾತ್ರಗಳ ಬಗ್ಗೆ ಒಂದಷ್ಟು ವಿಚಾರಗಳನ್ನು ಹಂಚಿಕೊಂಡರು. ಸಂಗೀತ ನಿರ್ದೇಶಕ ವೀರ್ ಸಮರ್ಥ್ ಈ ಸಿನಿಮಾ ಹಾಡುಗಳು ಭಿನ್ನವಾಗಿವೆ ಎಂಬ ಸುಳಿವನ್ನು ತಮ್ಮ ಮಾತುಗಳ ಮೂಲಕ ಹೊಮ್ಮಿಸಿದರು.

ಟೀಸರ್ ಬಿಡುಗಡೆ ವೇದಿಕೆಯಲ್ಲಿಯೇ ಲವ್ ಸೀಸನ್ಸ್ ಚಿತ್ರ ಜೂನ್ ತಿಂಗಳಲ್ಲಿ ಬಿಡುಗಡೆಗೊಳ್ಳಲಿರುವ ಸುಳಿವು ಸಿಕ್ಕಿದೆ. ಇದೀಗ ಮೊದಲನೆಯದ್ದಾಗಿ ಟೀಸರ್ ಬಿಡುಗಡೆಗೊಂಡಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಹಾಡುಗಳು ಮತ್ತು ಟ್ರೈಲರ್ ಬಿಡುಗಡೆಗೊಳ್ಳಲಿದೆ. ಇದು ಯಾರು ಯಾರನ್ನೂ ನಂಬಲು ಕಷ್ಟವಾಗುವಂಥಾ ಕಾಲಮಾನ. ನಂಬಿಕೆಯೆಂಬ ಚುಂಬಕ ಶಕ್ತಿಯ ಸುತ್ತ ಹೊಸೆಯಲ್ಪಟ್ಟಿರುವ, ಪ್ರೇಮದ ಪರಾಗ ಮೆತ್ತಿಕೊಂಡಿರುವ ಕಥೆ `ಲವ್ ಸೀಸನ್ಸ್’ನಲ್ಲಿದೆ. ಬೆಂಗಳೂರಿನ ನಾನಾ ಏರಿಯಾಗಳಲ್ಲಿ ಈ ಚಿತ್ರದ ಚಿತ್ರೀಕರಣ ನಡೆದಿದೆ.

ಎನ್.ಆರ್ ಸ್ಟುಡಿಯೋಸ್ ಬ್ಯಾನರ್‌ನಡಿಯಲ್ಲಿ ಎನ್.ಆರ್ ಮಂಜುನಾಥ (ನೀಲೇರಿ) ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಕೃತ್ವಿಕ್‌ ನಿರ್ದೇಶನ, ವೀರ್ ಸಮರ್ಥ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಕೆ.ಕಲ್ಯಾಣ್, ಪ್ರಮೋದ್ ಮರವಂತೆ ಮುಂತಾದವರು ಸಾಹಿತ್ಯ ಬರೆದಿದ್ದಾರೆ. ಅವಿನಾಶ ಶಾಸ್ತ್ರಿ ಛಾಯಾಗ್ರಹಣ, ಮಧು ತುಂಬಕೆರೆ ಸಂಕಲನ, ಭಜರಂಗಿ ಮೋಹನ್‌ ನೃತ್ಯ ಸಂಯೋಜನೆಯಿರುವ ಈ ಚಿತ್ರದಲ್ಲಿ ಮುಕುಂದ ರಾಮಸ್ವಾಮಿ ನಾಯಕನಾಗಿ ನಟಿಸಿದ್ದಾರೆ. ದಿಯಾ ಕೀರ್ತಿ, ಚಂದನಾ ಗೌಡ ಮತ್ತು ಶ್ವೇತಾ ಕೊಗ್ಲೂರು ನಾಯಕಿಯರಾಗಿ ಜೊತೆಯಾಗಿದ್ದಾರೆ. ಮಂಡ್ಯ ರಮೇಶ್, ರಾಜೇಶ್ ನಟರಂಗ, ಸಂಗೀತಾ ಅನಿಲ್, ಜಯತೀರ್ಥ, ಚೇತನ್ ದುರ್ಗ, ಕಾಮಿಡಿ ಕಿಲಾಡಿ ಸದಾನಂದ, ಹುಲಿ ಕಾರ್ತಿಕ್, ಬೇಬಿ ರಿತು ಸಿಂಗ್ ಮುಂತಾದವರ ತಾರಾಗಣವಿದೆ.

Comments (0)

Your email address will not be published. Required fields are marked *

Back to top button