ಸ್ಯಾಂಡಲ್‌ವುಡ್‌ನಿಂದ ಕೆರಿಯರ್ ಆರಂಭಿಸಿ ಇಂದು ದೇಶಾದ್ಯಂತ ‘ನ್ಯಾಷನಲ್ ಕ್ರಶ್’ ಆಗಿ ಮಿಂಚುತ್ತಿರುವ ನಟಿ ರಶ್ಮಿಕಾ ಮಂದಣ್ಣ ಹಾಗೂ ಟಾಲಿವುಡ್ ರೌಡಿ ಸ್ಟಾರ್ ವಿಜಯ್ ದೇವರಕೊಂಡ ಅವರ ಮದುವೆ ಸುದ್ದಿ ಈಗ ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸಿದೆ. ಹಲವು ದಿನಗಳಿಂದ ಹರಿದಾಡುತ್ತಿದ್ದ ಗುಮಾನಿಗೆ ಇದೀಗ ಒಂದು ವೈರಲ್ ವಿಡಿಯೋ ಪುಷ್ಟಿ ನೀಡಿದ್ದು, ಈ ಜೋಡಿ ಶೀಘ್ರದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನಲಾಗುತ್ತಿದೆ.
ಉದಯಪುರದ ಅರಮನೆಯಲ್ಲಿ ಮದುವೆ ಸಂಭ್ರಮ?
ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋಗಳ ಪ್ರಕಾರ, ರಾಜಸ್ಥಾನದ ಉದಯಪುರ ಸಿಟಿ ಪ್ಯಾಲೇಸ್ ಹೋಟೆಲ್‌ನಲ್ಲಿ ಮದುವೆಯ ಸಿದ್ಧತೆಗಳು ಭರ್ಜರಿಯಾಗಿ ನಡೆಯುತ್ತಿವೆ. ಕೇವಲ ಆಪ್ತ ಸ್ನೇಹಿತರು ಹಾಗೂ ಕುಟುಂಬದವರಿಗೆ ಮಾತ್ರ ಆಹ್ವಾನ ನೀಡಲಾಗಿದ್ದು, ಮದುವೆಯನ್ನು ಅತ್ಯಂತ ಗೌಪ್ಯವಾಗಿ ಇಡಲು ಈ ಜೋಡಿ ನಿರ್ಧರಿಸಿದೆ ಎಂಬ ಚರ್ಚೆ ಜೋರಾಗಿದೆ.
ಈ ಹಿಂದೆ ಈ ಜೋಡಿಯ ವಿವಾಹ ಫೆಬ್ರವರಿ 26ಕ್ಕೆ ನಡೆಯಲಿದೆ ಎಂದು ಸುದ್ದಿಯಾಗಿತ್ತು. ಆದರೆ ಈಗ ವೈರಲ್ ಆಗಿರುವ ವಿಡಿಯೋಗಳ ಪ್ರಕಾರ, ಫೆಬ್ರವರಿ 2ರಂದೇ (ಇಂದು) ಮದುವೆ ನಡೆಯಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಸೆಲೆಬ್ರಿಟಿಗಳು ಅಭಿಮಾನಿಗಳ ದೃಷ್ಟಿ ತಪ್ಪಿಸಲು ದಿನಾಂಕವನ್ನು ರಹಸ್ಯವಾಗಿಡುವುದು ಸಾಮಾನ್ಯ. ರಶ್ಮಿಕಾ ಕೂಡ ಅದೇ ತಂತ್ರ ಅನುಸರಿಸಿರಬಹುದು ಎನ್ನಲಾಗುತ್ತಿದೆ.
‘ಗೀತಾ ಗೋವಿಂದಂ’ ಸಿನಿಮಾದಲ್ಲಿ ಈ ಜೋಡಿಯ ಕೆಮಿಸ್ಟ್ರಿ ನೋಡಿ ಅಭಿಮಾನಿಗಳು ಫಿದಾ ಆಗಿದ್ದರು. ಅಂದಿನಿಂದಲೇ ಇವರಿಬ್ಬರ ನಡುವೆ ಪ್ರೇಮಾಂಕುರವಾಗಿದೆ ಎಂಬ ಗಾಸಿಪ್‌ಗಳು ಕೇಳಿಬರುತ್ತಿದ್ದವು. ಈ ಹಿಂದೆ ನಟ ರಕ್ಷಿತ್ ಶೆಟ್ಟಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ರಶ್ಮಿಕಾ, ಕಾರಣಾಂತರಗಳಿಂದ ಅದರಿಂದ ಹೊರಬಂದಿದ್ದರು. ಇದೀಗ ವಿಜಯ್ ದೇವರಕೊಂಡ ಜೊತೆ ಹೊಸ ಜೀವನಕ್ಕೆ ರಶ್ಮಿಕಾ ಸಜ್ಜಾಗುತ್ತಿದ್ದಾರೆ ಎಂಬ ಸುದ್ಧಿ ಹರಿದಾಡುತ್ತಿದೆ.
ಇಷ್ಟೆಲ್ಲಾ ಸುದ್ದಿಗಳು ಹರಿದಾಡುತ್ತಿದ್ದರೂ ವಿಜಯ್ ದೇವರಕೊಂಡ ಅಥವಾ ರಶ್ಮಿಕಾ ಮಂದಣ್ಣ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಮದುವೆಯ ಫೋಟೋಗಳು ಹೊರಬರಬಾರದು ಎಂದು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆಯಂತೆ. ಒಂದು ವೇಳೆ ಇಂದು ವಿವಾಹ ನಡೆದಿದ್ದೇ ಆದಲ್ಲಿ, ಸಂಜೆ ಹೊತ್ತಿಗೆ ಈ ಸ್ಟಾರ್ ಜೋಡಿಯ ಫೋಟೋಗಳು ಅಧಿಕೃತವಾಗಿ ಹೊರಬೀಳುವ ಸಾಧ್ಯತೆಯಿದೆ.


