ಸಿನಿಮಾಸುದ್ದಿ

ಫ್ಯಾಷನ್ ಲೋಕಕ್ಕೆ ಪ್ರಿಯಾಂಕಾ ಉಪೇಂದ್ರ ಪರಿಸರ ಸ್ನೇಹಿಪಾಠ

ಸ್ಯಾಂಡಲ್‌ವುಡ್‌ನ ಎವರ್‌ಗ್ರೀನ್ ಸುಂದರಿ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಅವರ ಪತ್ನಿ ಪ್ರಿಯಾಂಕಾ ಉಪೇಂದ್ರ ಅವರು ತಮ್ಮ ಹೊಸ ಫೋಟೋಶೂಟ್ ಮೂಲಕ ಕೇವಲ ಗ್ಲಾಮರ್ ಮಾತ್ರವಲ್ಲದೆ, ಪರಿಸರ ಸಂರಕ್ಷಣೆಯ ಅದ್ಭುತ ಸಂದೇಶವನ್ನು ಸಾರುವ ಮೂಲಕ ಸದ್ಯ ಸುದ್ದಿಯಲ್ಲಿದ್ದಾರೆ. ಪ್ರಜ್ಞಾವಂತ ನಾಗರಿಕಳಾಗಿ ಭೂಮಿ ಮತ್ತು ಪರಿಸರದ ಬಗ್ಗೆ ಅವರು ತೋರಿರುವ ಕಾಳಜಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗುತ್ತಿದ್ದು, ಪೋಸ್ಟ್ ವೈರಲ್ ಆಗುತ್ತಿದೆ.

ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ‘ಸಸ್ಟೈನಬಲ್ ಲಿವಿಂಗ್’ ಅಥವಾ ಸುಸ್ಥಿರ ಜೀವನಶೈಲಿಯ ಬಗ್ಗೆ ಸುದೀರ್ಘವಾಗಿ ಬರೆದುಕೊಂಡಿರುವ ಪ್ರಿಯಾಂಕಾ, ನಾವು ಬೆಳೆಯುತ್ತಿರುವಂತೆ ನಮ್ಮ ಆಯ್ಕೆಗಳು ಕೂಡ ಪ್ರಕೃತಿಗೆ ಪೂರಕವಾಗಿರಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಪ್ರಾಣಿ ಹಿಂಸೆ ಇಲ್ಲದ ಮತ್ತು ಪರಿಸರಕ್ಕೆ ಹಾನಿ ಮಾಡದ ವಸ್ತುಗಳನ್ನು ಬಳಸುವ ಮೂಲಕ ಭೂಮಿಯ ಮೇಲಿನ ಕಾರ್ಬನ್ ಫುಟ್‌ಪ್ರಿಂಟ್ ಅನ್ನು ಕಡಿಮೆ ಮಾಡುವುದು ಇಂದಿನ ತುರ್ತು ಅಗತ್ಯವಾಗಿದೆ ಎಂಬ ಕರೆಯನ್ನು ನೀಡಿದ್ದಾರೆ.

ಫ್ಯಾಷನ್ ಎಂದರೆ ಕೇವಲ ಪ್ರಾಣಿಜನ್ಯ ಚರ್ಮದ ಬ್ಯಾಗ್ ಅಥವಾ ಶೂಗಳ ಬಳಕೆಯಲ್ಲ ಎನ್ನುವುದನ್ನು ಪ್ರಿಯಾಂಕಾ ಅವರು ಸ್ಪಷ್ಟಪಡಿಸಿದ್ದಾರೆ. ಪ್ರಾಣಿಗಳ ಚರ್ಮಕ್ಕೆ ಪರ್ಯಾಯವಾಗಿ ಪರಿಸರ ಸ್ನೇಹಿ ‘ವ್ಯಗನ್ ಬ್ಯಾಗ್ಸ್’ ಬಳಕೆಯನ್ನು ಅವರು ಉತ್ತೇಜಿಸುತ್ತಿದ್ದಾರೆ. ಪ್ರಾಣಿಗಳ ಮೇಲೆ ಯಾವುದೇ ಪರೀಕ್ಷೆ ನಡೆಸದ ಮತ್ತು ರಾಸಾಯನಿಕ ಮುಕ್ತವಾದ ಬ್ರಾಂಡ್‌ಗಳಿಗೆ ಬೆಂಬಲ ನೀಡುವ ಮೂಲಕ ವಿಶ್ವವನ್ನು ವಾಸಿಸಲು ಯೋಗ್ಯವಾದ ಉತ್ತಮ ತಾಣವನ್ನಾಗಿ ಮಾಡಲು ಸಾಧ್ಯ ಎನ್ನುವುದು ಅವರ ದೃಢ ನಿಲುವಾಗಿದೆ.

ಸ್ಟೈಲ್ ಜೊತೆಗೆ ಸಮಾಜಕ್ಕೆ ಸದಾ ಹಿತಕರವಾದ ಸಂದೇಶ ನೀಡುವಲ್ಲಿ ಪ್ರಿಯಾಂಕಾ ಉಪೇಂದ್ರ ಅವರು ಮುಂಚೂಣಿಯಲ್ಲಿದ್ದಾರೆ. ‘ಪರಿಸರ ಉಳಿಸಿ, ಪ್ರಾಣಿಗಳನ್ನು ಪ್ರೀತಿಸಿ’ ಎಂಬ ಅವರ ಈ ಕಳಕಳಿಯು ಇಂದಿನ ಯುವ ಪೀಳಿಗೆಗೆ ನಿಜಕ್ಕೂ ಮಾದರಿಯಾಗಿದೆ. ಫ್ಯಾಷನ್ ಲೋಕಕ್ಕೆ ಹೊಸ ಭಾಷ್ಯ ಬರೆಯುತ್ತಿರುವ ಅವರ ಈ ನಡೆ ಪರಿಸರ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗದೆ ಮೆಚ್ಚುಗೆಯ ಮಹಾಪೂರವನ್ನೇ ಹರಿಸುವಂತೆ ಮಾಡಿದೆ.

Comments (0)

Your email address will not be published. Required fields are marked *

Back to top button