ಸಿನಿಮಾಸುದ್ದಿ

ಸ್ಮಾರಕ ವಿವಾದದ ಬಗ್ಗೆ ಮೌನ ಮುರಿದ ನಟ ಅನಿರುದ್ಧ ಜತ್ಕರ್

ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಸ್ಮಾರಕದ ವಿಚಾರವಾಗಿ ಎದ್ದಿರುವ ವಿವಾದಕ್ಕೆ ಸಂಬಂಧಿಸಿದಂತೆ ನಟ ಹಾಗೂ ವಿಷ್ಣುದಾದಾ ಅಳಿಯ ಅನಿರುದ್ಧ ಜತ್ಕರ್ ಅವರು ಸುದೀರ್ಘ ಪತ್ರ ಬರೆಯುವ ಮೂಲಕ ತಮ್ಮ ಮೌನ ಮುರಿದಿದ್ದಾರೆ. ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿಯೇ ಸ್ಮಾರಕ ನಿರ್ಮಾಣವಾಗಬೇಕೆಂದು ಅಭಿಮಾನಿಗಳ ಜೊತೆಗೂಡಿ ತಾವು ಕೂಡ ಸುಮಾರು ಆರೂವರೆ ವರ್ಷಗಳ ಕಾಲ ನಿರಂತರವಾಗಿ ಹೋರಾಟ ನಡೆಸಿದ್ದಾಗಿ ಅವರು ಸ್ಪಷ್ಟಪಡಿಸಿದ್ದಾರೆ. ಆದರೆ ಆ ಜಾಗವು ಅರಣ್ಯ ಇಲಾಖೆಗೆ ಸೇರಿದ್ದರಿಂದ ಎದುರಾದ ಕಾನೂನು ಅಡಚಣೆಗಳು ಹಾಗೂ ಮುಖ್ಯಮಂತ್ರಿಗಳ ಸೂಚನೆಯ ಹೊರತಾಗಿಯೂ ಸ್ಮಾರಕ ನಿರ್ಮಾಣ ಅಸಾಧ್ಯವಾದ ಕಹಿ ಸತ್ಯವನ್ನು ಅವರು ಜನರ ಮುಂದೆ ಇಟ್ಟಿದ್ದಾರೆ. ಭಾರತಿ ವಿಷ್ಣುವರ್ಧನ್ ಅವರು ಸ್ವಂತ ಖರ್ಚಿನಲ್ಲಿ ನಿರ್ಮಿಸಿದ್ದ ಮಂಟಪವನ್ನೂ ತೆರವುಗೊಳಿಸಿರುವುದು ಅತ್ಯಂತ ವಿಷಾದನೀಯ ಸಂಗತಿ ಎಂದು ಅವರು ತಮ್ಮ ನೋವನ್ನು ಪತ್ರದಲ್ಲಿ ಹಂಚಿಕೊಂಡಿದ್ದಾರೆ.

ಮೈಸೂರಿನಲ್ಲಿ ನಿರ್ಮಾಣವಾಗಿರುವ ಸ್ಮಾರಕದ ಬಗ್ಗೆ ಮಾತನಾಡಿರುವ ಅನಿರುದ್ಧ್, ಅದು ಕೇವಲ ಸುಲಭವಾಗಿ ನಿರ್ಮಾಣವಾದದ್ದಲ್ಲ, ಅದರ ಹಿಂದೆ ಕುಟುಂಬದ ಅಪಾರ ಪರಿಶ್ರಮ ಮತ್ತು ತ್ಯಾಗವಿದೆ ಎಂದು ತಿಳಿಸಿದ್ದಾರೆ. ಬನಶಂಕರಿಯಿಂದ ಕೆಂಗೇರಿವರೆಗಿನ ರಸ್ತೆಗೆ ವಿಷ್ಣುವರ್ಧನ್ ಅವರ ಹೆಸರಿಡಲು ಕುಟುಂಬವು ಪಟ್ಟ ಪಾಡು ತಮಗೆ ತಿಳಿದಿದೆ ಎಂದಿರುವ ಅವರು, ಏನೂ ಮಾಡದವರು ಇಂದು ವಿನಾಕಾರಣ ಟೀಕೆಗಳನ್ನು ಮಾಡುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟೀಕಾಕಾರರಿಗೆ ನೇರವಾಗಿಯೇ ಟಾಂಗ್ ನೀಡಿರುವ ಅನಿರುದ್ಧ್, ಸುಖಾಸುಮ್ಮನೆ ಕುಟುಂಬದ ಬಗ್ಗೆ ಅಪಪ್ರಚಾರ ಮಾಡುವುದನ್ನು ನಿಲ್ಲಿಸಿ ಎಂದು ಎಚ್ಚರಿಕೆ ನೀಡಿದ್ದಾರೆ.

ಮುಖ್ಯವಾಗಿ ಅಭಿಮಾನಿಗಳ ವೇಷ ಧರಿಸಿ ಬಂದು ವಿಷ್ಣು ಕುಟುಂಬದ ಸದಸ್ಯರ ಮಧ್ಯೆ ಬಿರುಕು ಮೂಡಿಸಲು ಪ್ರಯತ್ನಿಸುತ್ತಿರುವವರ ಬಗ್ಗೆ ಅಭಿಮಾನಿಗಳು ಜಾಗರೂಕರಾಗಿರಬೇಕು ಎಂದು ಅವರು ಮನವಿ ಮಾಡಿದ್ದಾರೆ. ಇದೇ ವೇಳೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಮೇಲಿರುವ ಪ್ರೀತಿ ಮತ್ತು ಗೌರವವನ್ನು ತಾವು ಯಾರ ಮುಂದೆಯೂ ಸಾಬೀತುಪಡಿಸುವ ಅಗತ್ಯವಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ. ಸುಳ್ಳು ಆರೋಪಗಳನ್ನು ಮಾಡುತ್ತಾ ಗೊಂದಲ ಸೃಷ್ಟಿಸುವವರ ವಿರುದ್ಧ ಕಿಡಿಕಾರುವ ಮೂಲಕ, ಸ್ಮಾರಕದ ವಿಚಾರದಲ್ಲಿ ಕುಟುಂಬದ ನಿಲುವು ಮತ್ತು ಪಟ್ಟ ಶ್ರಮವನ್ನು ಅನಿರುದ್ಧ್ ಈ ಪತ್ರದ ಮೂಲಕ ಸ್ಪಷ್ಟಪಡಿಸಿದ್ದಾರೆ.

Comments (0)

Your email address will not be published. Required fields are marked *

Back to top button