ಬಿಹಾರ ಸಿಎಂ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ ಫಿಕ್ಸ್!

ಬಿಹಾರ ರಾಜಕಾರಣದಲ್ಲಿ ಅತ್ಯಂತ ಅಚ್ಚರಿಯ ಮತ್ತು ಐತಿಹಾಸಿಕ ಬೆಳವಣಿಗೆಯೊಂದು ನಡೆದಿದ್ದು, ಮುಖ್ಯಮಂತ್ರಿ ನಿತೀಶ್ ಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಸಜ್ಜಾಗಿದ್ದಾರೆ. ಬಿಹಾರದ ಸಿಎಂ ಗಾದಿಯಿಂದ ಕೆಳಗಿಳಿದು ರಾಜ್ಯಸಭೆಗೆ ಸ್ಪರ್ಧಿಸಲು ನಿತೀಶ್ ಕುಮಾರ್ ನಿರ್ಧರಿಸಿದ್ದು, ಈ ಕುರಿತು ತಮ್ಮ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ಮಾಹಿತಿ ಹಂಚಿಕೊಳ್ಳುವ ಮೂಲಕ ರಾಷ್ಟ್ರ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದಾರೆ.

ಸಂಸತ್ತಿನ ಉಭಯ ಸದನಗಳ ಸದಸ್ಯನಾಗಬೇಕೆಂಬ ದಶಕಗಳ ಹಂಬಲ ಈಗ ಈಡೇರುತ್ತಿದೆ ಎಂದು ನಿತೀಶ್ ಕುಮಾರ್ ಭಾವುಕವಾಗಿ ಪೋಸ್ಟ್ ಮಾಡಿದ್ದಾರೆ. ಕಳೆದ ಎರಡು ದಶಕಗಳ ಕಾಲ ತಮಗೆ ಬೆಂಬಲ ನೀಡಿದ ಬಿಹಾರದ ಜನತೆಗೆ ಧನ್ಯವಾದ ಅರ್ಪಿಸಿರುವ ಅವರು, ಶೀಘ್ರದಲ್ಲೇ ರಾಜ್ಯಸಭೆಗೆ ನಾಮಪತ್ರ ಸಲ್ಲಿಸುವುದಾಗಿ ಸ್ಪಷ್ಟಪಡಿಸಿದ್ದಾರೆ. ಇದು ಬಿಹಾರದ ರಾಜಕೀಯ ಸಮೀಕರಣವನ್ನೇ ಸಂಪೂರ್ಣವಾಗಿ ಬದಲಿಸಲಿದೆ.
ತಮ್ಮ ರಾಜೀನಾಮೆಯ ನಂತರ ಅಸ್ತಿತ್ವಕ್ಕೆ ಬರಲಿರುವ ಹೊಸ ಸರ್ಕಾರಕ್ಕೆ ಪೂರ್ಣ ಬೆಂಬಲ ಮತ್ತು ಮಾರ್ಗದರ್ಶನ ನೀಡುವುದಾಗಿ ನಿತೀಶ್ ಕುಮಾರ್ ಭರವಸೆ ನೀಡಿದ್ದಾರೆ. “ಅಭಿವೃದ್ಧಿ ಹೊಂದಿದ ಬಿಹಾರ ನಿರ್ಮಿಸಲು ನಾನು ಸದಾ ಬದ್ಧನಾಗಿರುತ್ತೇನೆ” ಎಂದು ಹೇಳುವ ಮೂಲಕ, ಸಕ್ರಿಯ ರಾಜಕಾರಣದಿಂದ ತಾವು ದೂರ ಸರಿಯುತ್ತಿಲ್ಲ, ಬದಲಿಗೆ ದೆಹಲಿ ಮಟ್ಟದಲ್ಲಿ ಹೊಸ ಜವಾಬ್ದಾರಿ ವಹಿಸಿಕೊಳ್ಳುತ್ತಿದ್ದೇನೆ ಎಂಬ ಸುಳಿವು ನೀಡಿದ್ದಾರೆ.
ನಿತೀಶ್ ಕುಮಾರ್ ಅವರ ಈ ದಿಢೀರ್ ನಿರ್ಧಾರದಿಂದಾಗಿ ಬಿಹಾರದ ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಕುತೂಹಲ ಈಗ ಮನೆ ಮಾಡಿದೆ. ಮೈತ್ರಿಕೂಟದ ಒಳಗಿನ ಒಮ್ಮತದ ಅಭ್ಯರ್ಥಿ ಯಾರು ಎಂಬ ಚರ್ಚೆಗಳು ಬಿರುಸಿನಿಂದ ನಡೆಯುತ್ತಿದ್ದು, ಬಿಹಾರದ ರಾಜಕೀಯ ಸ್ವರೂಪವೇ ಬದಲಾಗುವ ಮುನ್ಸೂಚನೆ ಸಿಕ್ಕಿದೆ. ದೀರ್ಘಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ನಿತೀಶ್ ಕುಮಾರ್ ಅವರ ಈ ‘ಎಕ್ಸಿಟ್ ಪ್ಲಾನ್’ ರಾಷ್ಟ್ರ ರಾಜಕಾರಣದ ಮೇಲೂ ಪ್ರಭಾವ ಬೀರಲಿದೆ.




