
ಡಾ.ರಾಜ್ ಕುಮಾರ್ ಅವರ ಸ್ಮಾರಕದ ಭೂಮಿಗೆ ಸಂಬಂಧಿಸಿದಂತೆ ನಟ ಅಹಿಂಸಾ ಚೇತನ್ ಮಾಡಿದ್ದ ಟ್ವೀಟ್ ಇದೀಗ ಚಿತ್ರರಂಗ ಮತ್ತು ಅಭಿಮಾನಿಗಳ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಹಾಗೂ ವಿವಾದಕ್ಕೆ ಕಾರಣವಾಗಿದ್ದು . ನಿನ್ನೆಯಷ್ಟೇ ಅಭಿಮಾನಿಗಳ ಆಕ್ರೋಶಕ್ಕೆ ಮಣಿದು ಕ್ಷಮೆ ಕೇಳಿದ್ದ ಚೇತನ್, ತಮ್ಮ ನಿಲುವನ್ನು ಬದಲಿಸಿದ್ದು ತಾವು ಮಾಡಿದ ಟ್ವೀಟ್ ಅನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ತಾವು ನಿನ್ನೆ ಕ್ಷಮೆ ಕೇಳಿದ್ದು ಕೇವಲ ರಾಜ್ ಅಭಿಮಾನಿಗಳು ನೀಡಿದ ಧಮ್ಕಿ ಹಾಗೂ ಒತ್ತಡದಿಂದಾಗಿ ಮಾತ್ರ ಎಂದು ಸ್ಪಷ್ಟಪಡಿಸಿರುವ ಅವರು, ಇಂದಿಗೂ ತಮ್ಮ ಮಾತಿನ ಮೇಲೆ ದೃಢವಾಗಿ ನಿಂತಿರುವುದಾಗಿ ಘೋಷಿಸಿದ್ದಾರೆ.

ಚೇತನ್ ಹಿರಿಯ ಕನ್ನಡ ಹೋರಾಟಗಾರ ಸಾರಾ ಗೋವಿಂದು ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಾರಾ ಗೋವಿಂದು ಸಾರ್ವಜನಿಕವಾಗಿ ಬಳಸಿದ ಪದಗಳು ಸರಿ ಇಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿರುವ ಅವರು, ರಾಜ್ಕುಮಾರ್ ಹೆಸರಿನಲ್ಲಿ ಕೆಲವರು ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ನಿನ್ನೆ ತಮ್ಮ ಮನೆ ಬಳಿ ಬಂದಿದ್ದ ವ್ಯಕ್ತಿಗಳು ಗೂಂಡಾಗಿರಿ ಮಾಡಲು ಬಂದಿದ್ದರು ಎಂದು ಆರೋಪಿಸಿರುವ ನಟ, ಸಾರಾ ಗೋವಿಂದು ಅವರಂತಹ ವ್ಯಕ್ತಿಗಳಿಂದಲೇ ರಾಜ್ ಅಭಿಮಾನಿಗಳ ಹೆಸರಿಗೆ ಕಪ್ಪುಚುಕ್ಕೆ ಬರುತ್ತಿದೆ ಎಂದು ಗುಡುಗಿದ್ದಾರೆ.
ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡಿದ ಚೇತನ್, ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕಿದೆ ಎಂದು ಪ್ರತಿಪಾದಿಸಿದ್ದಾರೆ. ತಾವು ರಾಜ್ಕುಮಾರ್ ಅವರಿಂದ ಸೌಜನ್ಯ ಹಾಗೂ ಮಾತಿನ ಹಿಡಿತವನ್ನು ಕಲಿತಿದ್ದು, ಅದನ್ನೇ ಮುಂದುವರಿಸಿಕೊಂಡು ಹೋಗುವುದಾಗಿ ತಿಳಿಸಿದ್ದಾರೆ. ಮಹಿಳಾ ನಿಂದನೆ ಮಾಡುವ ಮೂಲಕ ರಾಜ್ ಹೆಸರಿಗೆ ಮಸಿ ಬಳಿಯಬಾರದು ಎಂದು ವಿನಂತಿಸಿರುವ ಅವರು, ಕಾನೂನು ಹೋರಾಟಗಾರರು ಹಾಗೂ ಹಿರಿಯರ ಜೊತೆ ಚರ್ಚಿಸಿ ಮುಂದಿನ ದಿನಗಳಲ್ಲಿ ಕಾನೂನಾತ್ಮಕವಾಗಿ ತಮ್ಮ ವಿಚಾರಗಳನ್ನು ಮಂಡಿಸುವುದಾಗಿ ಹೇಳಿದ್ದಾರೆ.

ತಮ್ಮನ್ನು ‘ಹುಚ್ಚ’ ಎಂದು ಕರೆಯುವವರ ಬಗ್ಗೆ ತಲೆಕೆಡಿಸಿಕೊಳ್ಳದ ಚೇತನ್, ಅನೇಕರು ತಮ್ಮ ವಿಚಾರವನ್ನು ಒಪ್ಪಿಕೊಂಡಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ತಾವು ಯಾರಿಗಾದರೂ ದಬ್ಬಾಳಿಕೆ ಮಾಡಲು ಅಥವಾ ಹೆದರಿಸಲು ಹೋಗುವುದಿಲ್ಲ, ಬದಲಿಗೆ ವಿಚಾರದ ಆಧಾರದ ಮೇಲೆ ಹೋರಾಡುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ. ತಮ್ಮ ಟ್ವೀಟ್ನಿಂದ ಯಾರಿಗಾದರೂ ನೋವಾಗಿದ್ದರೆ ಮಾತ್ರ ವಿಷಾದ ವ್ಯಕ್ತಪಡಿಸಿದ್ದೇನೆ ಹೊರತು, ಅದರಲ್ಲಿರುವ ವಿಚಾರದಿಂದ ಹಿಂದೆ ಸರಿಯುವುದಿಲ್ಲ ಎಂಬ ಖಡಕ್ ನಿಲುವನ್ನು ತಳೆದಿದ್ದಾರೆ.

ಡಾ.ರಾಜ್ಕುಮಾರ್ ಅವರನ್ನು ತಾವು ಎಂದಿಗೂ ವೈಯಕ್ತಿಕವಾಗಿ ಟಾರ್ಗೆಟ್ ಮಾಡಿಲ್ಲ ಎಂದು ಚೇತನ್ ಸಮರ್ಥನೆ ನೀಡಿದ್ದಾರೆ. ಅಣ್ಣಾವ್ರು ಬದುಕಿದ್ದರೆ ಅವರೇ ತಮಗೆ ಇಷ್ಟು ದೊಡ್ಡ ಜಾಗ ಬೇಡ ಎಂದು ಹೇಳುತ್ತಿದ್ದರು ಎಂಬ ಅಭಿಪ್ರಾಯ ಹಂಚಿಕೊಂಡಿರುವ ಅವರು, ಸರ್ಕಾರದ ಯೋಜನೆಗಳು ಎಲ್ಲರಿಗೂ ಸಮಾನವಾಗಿರಬೇಕು ಎಂಬುದು ತಮ್ಮ ವಾದ ಎಂದಿದ್ದಾರೆ. ಕೋವಿಡ್ ಸಮಯದಲ್ಲಿ ಸ್ಮಾರಕಕ್ಕೆ ಕೋಟಿಗಟ್ಟಲೆ ಹಣ ಬೇಕಾ ಎಂದು ತಾವು ಪ್ರಶ್ನಿಸಿದ್ದನ್ನು ನೆನಪಿಸಿಕೊಂಡ ಅವರು, ಈ ಹೋರಾಟ ಪ್ರಚಾರಕ್ಕಾಗಿ ಅಲ್ಲ ಬದಲಿಗೆ ಸಮಾನತೆಯ ವಿಚಾರಕ್ಕಾಗಿ ಮಾಡುತ್ತಿರುವುದು ಎಂದು ಹೇಳಿದ್ದಾರೆ.




