
ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೀಡಿರುವ ಇತ್ತೀಚಿನ ಹೇಳಿಕೆಗಳು ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿವೆ. ಇನ್ಮುಂದೆ ಯಾವುದೇ ರಾಜಕೀಯ ವಿಚಾರಗಳನ್ನು ತಾವು ಬಹಿರಂಗಪಡಿಸುವುದಿಲ್ಲ ಎಂದು ಡಿ ಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದು, ಬದಲಾಗಿ ಕಾಲ ಬಂದಾಗ ಎಲ್ಲವೂ ತಾನಾಗಿಯೇ ಗೊತ್ತಾಗಲಿದೆ ಎಂಬ ನಿಗೂಢ ಉತ್ತರ ನೀಡಿದ್ದಾರೆ. ನಮ್ಮ ಪಕ್ಷದಲ್ಲಿ ಯಾವುದೇ ಆಂತರಿಕ ಸಮಸ್ಯೆಗಳಿಲ್ಲ ಎಂದು ವಾದಿಸಿರುವ ಅವರು, ಏನೇನು ಯಾವಾಗ ಆಗಬೇಕೋ ಅದೆಲ್ಲವೂ ಆಯಾ ಸಮಯಕ್ಕೆ ಸರಿಯಾಗಿ ನಡೆಯಲಿದೆ ಮತ್ತು ಈ ಹಿಂದೆ ಏನೇನು ತೀರ್ಮಾನಗಳಾಗಿವೆಯೋ ಅವುಗಳೆಲ್ಲವೂ ಚಾಲ್ತಿಯಲ್ಲಿ ಇರಲಿವೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

ಬಹಿರಂಗವಾಗಿ ಚರ್ಚೆ ನಡೆಸುವುದಕ್ಕೆ ಡಿ.ಕೆ. ಶಿವಕುಮಾರ್ ಇದ್ದಕ್ಕಿದ್ದಂತೆ ಬ್ರೇಕ್ ಹಾಕಿರುವುದು ರಾಜಕೀಯ ವಲಯದಲ್ಲಿ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ‘ಕಾಲಾಯ ತಸ್ಮೈ ನಮಃ’ ಎಂಬ ಅವರ ಮಾತಿನ ಮರ್ಮವೇನು ಹಾಗೂ ಮೌನದ ಹಿಂದೆ ಯಾವ ತಂತ್ರ ಅಡಗಿದೆ ಎಂಬ ಚರ್ಚೆಗಳು ಈಗ ಎಲ್ಲೆಡೆ ಶುರುವಾಗಿವೆ. ಅದರಲ್ಲೂ ವಿಶೇಷವಾಗಿ ಡಿ ಕೆ ಶಿವಕುಮಾರ್ ಅವರ ದೆಹಲಿ ಭೇಟಿಯ ಬೆನ್ನಲ್ಲೇ ಈ ರೀತಿಯ ಹೇಳಿಕೆಗಳು ಹೊರಬಂದಿರುವುದು ಮಹತ್ವದ ಬೆಳವಣಿಗೆಯಾಗಿ ಕಾಣುತ್ತಿದೆ.

ಮುಂಬರುವ ಮೇ ತಿಂಗಳು ಕರ್ನಾಟಕ ರಾಜಕಾರಣದಲ್ಲಿ ಅತ್ಯಂತ ನಿರ್ಣಾಯಕವಾಗುವ ಲಕ್ಷಣಗಳು ಕಾಣಿಸುತ್ತಿವೆ. ಮೇ 15 ರಂದು ಡಿ.ಕೆ. ಶಿವಕುಮಾರ್ ಅವರ ಹುಟ್ಟುಹಬ್ಬವಿದ್ದು, ಅಂದು ಹೈಕಮಾಂಡ್ನಿಂದ ಅವರಿಗೆ ಯಾವುದಾದರೂ ಸಿಹಿ ಸುದ್ದಿ ಸಿಗಲಿದೆಯೇ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿದೆ. ಮೇ ತಿಂಗಳಲ್ಲಿ ರಾಜ್ಯ ರಾಜಕೀಯದಲ್ಲಿ ಬದಲಾವಣೆಯ ಗಾಳಿ ಬೀಸಲಿದೆಯೇ ಅಥವಾ ಅಧಿಕಾರ ಹಂಚಿಕೆಯ ಸೂತ್ರವು ಚಾಲನೆಗೆ ಬರಲಿದೆಯೇ ಎಂಬ ಪ್ರಶ್ನೆಗಳು ಈಗ ಚರ್ಚೆಯ ಮುನ್ನೆಲೆಗೆ ಬಂದಿವೆ.




