
ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ವೇಳೆ ಉಂಟಾದ ಆಡಳಿತಾತ್ಮಕ ಲೋಪಗಳು ಮತ್ತು ಸರ್ಕಾರದ ವಿವಿಧ ಇಲಾಖೆಗಳ ಧೋರಣೆಯ ವಿರುದ್ಧ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾಲ್ಕು ಪುಟಗಳ ಸುದೀರ್ಘ ಪತ್ರ ಬರೆದಿರುವ ಅವರು, ಸರ್ಕಾರಿ ಇಲಾಖೆಗಳ ಸಮನ್ವಯದ ಕೊರತೆ ಹಾಗೂ ಪೊಲೀಸ್ ಇಲಾಖೆಯ ಬೇಜವಾಬ್ದಾರಿತನದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ವಜ್ರಮುಷ್ಠಿ ಕಾಳಗ ಹಾಗೂ ಚಿನ್ನದ ಅಂಬಾರಿ ಮೆರವಣಿಗೆಯ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಸಂವಹನದ ಕೊರತೆ ಮತ್ತು ನಿರ್ಲಕ್ಷ್ಯ ಧೋರಣೆ ಅತ್ಯಂತ ವಿಷಾದನೀಯ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಚಿನ್ನದ ಅಂಬಾರಿ ಸರ್ಕಾರದ ಆಸ್ತಿಯಲ್ಲ, ಬದಲಿಗೆ ನಮ್ಮ ಖಾಸಗಿ ಆಸ್ತಿಯಾಗಿದೆ. ಅಂಬಾರಿ ಸುತ್ತಮುತ್ತ ಅನಧಿಕೃತ ವ್ಯಕ್ತಿಗಳ ಓಡಾಟ ಹೆಚ್ಚಾಗಿತ್ತು. ಅಂಬಾರಿ ಬಳಿ ಪೊಲೀಸ್ ಸಿಬ್ಬಂದಿ ಹಾಗೂ ಅವರ ಕುಟುಂಬಸ್ಥರು ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ಮುಕ್ತವಾಗಿ ಓಡಾಡಿಕೊಂಡಿದ್ದರು. ಇದು ಅಂಬಾರಿಯ ಭದ್ರತೆಗೆ ಗಂಭೀರ ಧಕ್ಕೆ ಉಂಟುಮಾಡಿದೆ ಎಂದು ಆಕ್ಷೇಪಿಸಿದ್ದಾರೆ.
ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ವಿರುದ್ಧ ನೇರ ಆರೋಪ ಮಾಡಿರುವ ರಾಜಮಾತೆ, ರಾಜ ಕುಟುಂಬಕ್ಕಾಗಿ ಮೀಸಲಿರಿಸಿದ್ದ ಸ್ಥಳವನ್ನು ಪೊಲೀಸರೇ ಅತಿಕ್ರಮಿಸಿಕೊಂಡಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ. ನಮ್ಮ ಅತಿಥಿಗಳಿಗಾಗಿ ನಿಗದಿಪಡಿಸಿದ್ದ ಖಾಸಗಿ ಸ್ಥಳದಲ್ಲಿ ಅನಧಿಕೃತವಾಗಿ ಬ್ಯಾರಿಕೇಡ್ ಹಾಕುವ ಮೂಲಕ ನವರಾತ್ರಿ ಆಚರಣೆಯ ಧಾರ್ಮಿಕ ಕಾರ್ಯಗಳಿಗೆ ಪೊಲೀಸರು ಉದ್ದೇಶಪೂರ್ವಕವಾಗಿ ಅಡ್ಡಿಪಡಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಾವ ಆನೆಗೆ ಅಂಬಾರಿ ಹೊರಸಲಾಗುತ್ತದೆ ಎಂಬುದರ ಬಗ್ಗೆ ಕೊನೆಯ ಕ್ಷಣದವರೆಗೂ ಯಾವುದೇ ಅಧಿಕೃತ ಮಾಹಿತಿ ನೀಡಿರಲಿಲ್ಲ. ಅಂತಿಮವಾಗಿ ನಾನೇ ಖುದ್ದು ಡಿಸಿಎಫ್ (DCF) ಅವರನ್ನು ಕೇಳಿ ತಿಳಿದುಕೊಳ್ಳಬೇಕಾದ ಮುಜುಗರದ ಪರಿಸ್ಥಿತಿಯನ್ನು ನಿರ್ಮಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸರ್ಕಾರಿ ಇಲಾಖೆಗಳ ನಡುವಿನ ಸಮನ್ವಯದ ಕೊರತೆ ಮತ್ತು ದಸರಾ ವೇಳೆ ಸಾಂಪ್ರದಾಯಿಕ ಆಚರಣೆಗಳಿಗೆ ಉಂಟಾದ ತೊಂದರೆಗಳು ತೀವ್ರ ನಿರಾಸೆ ಮೂಡಿಸಿವೆ ಎಂದು ತಿಳಿಸಿರುವ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರು, ಮುಂಬರುವ ದಿನಗಳಲ್ಲಿ ಇಂತಹ ಪ್ರಮಾದಗಳು ಮರುಕಳಿಸದಂತೆ ಎಚ್ಚರಿಕೆ ವಹಿಸುವಂತೆ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ.




