
ಮೈಸೂರು : ಇತಿಹಾಸದಲ್ಲೇ ಮೊದಲ ಬಾರಿಗೆ ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಜಟ್ಟಿ ಕಾಳಗ ರದ್ದಾಗಿದೆ. ಸರ್ಕಾರ – ಅರಮನೆ ಆಡಳಿತ ಮಂಡಳಿಯ ಸಮನ್ವಯದ ಕೊರತೆ ಮತ್ತು ಪೊಲೀಸರ ನಿರ್ಬಂಧದಿಂದಾಗಿ ಪೈಲ್ವಾನರು ಕಾಳಗದಿಂದ ಹಿಂದೆ ಸರಿದಿರುವುದರಿಂದ ದಸರಾ ಜಟ್ಟಿ ವಜ್ರಮುಷ್ಠಿ ಕಾಳಗ ಕ್ಯಾನ್ಸಲ್ ಆಗಿದೆ.
ಅರಮನೆಯ ಸವಾರಿ ತೊಟ್ಟಿಯಲ್ಲಿ ನಡೆಯಬೇಕಿದ್ದ ಈ ಸಾಂಪ್ರದಾಯಿಕ ವಜ್ರಮುಷ್ಠಿ ಕಾಳಗಕ್ಕಾಗಿ ಜಟ್ಟಿ ಪೈಲ್ವಾನರು ಶ್ವೇತವರಾಹ ಸ್ವಾಮಿ ದೇವಾಲಯದಲ್ಲಿ ಎಲ್ಲಾ ರೀತಿಯಿಂದಲೂ ಸಿದ್ಧರಾಗಿದ್ದರು. ಆದರೆ, ರಾಜವಂಶಸ್ಥರು ನೀಡಿದ್ದ ಪಾಸ್‌ಗಳಿಗೆ ಪೊಲೀಸ್ ಸಿಬ್ಬಂದಿ ಪ್ರವೇಶ ಕಲ್ಪಿಸಿಲ್ಲ. ಮುಹೂರ್ತದ ಯಾವುದೇ ಪರಿವೇ ಇಲ್ಲದೆ, ಗೇಟ್‌ನಲ್ಲೇ ಪೈಲ್ವಾನರನ್ನು ತಡೆಯಲಾಗಿದೆ. ಮುಹೂರ್ತದ ಒಳಗೆ ಅರಮನೆಯೊಳಗೆ ತೆರಳಿ ಸಿದ್ಧತೆ ನಡೆಸಲು ಖಾಕಿ ಪಡೆ ಬಿಡದ ಕಾರಣ ಪೈಲ್ವಾನರು ತೀವ್ರ ಪರದಾಡಬೇಕಾಯಿತು.
ಮೈಸೂರು ಸಂಸ್ಥಾನ ಹಾಗೂ ದಸರಾ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಈ ರೋಚಕ ಹಾಗೂ ರಕ್ತತರ್ಪಣದ ಕಾಳಗವನ್ನು ರದ್ದುಗೊಳಿಸಲಾಗಿದ್ದು, ರಾಜಮನೆತನದ ಆಚರಣೆಗಳಲ್ಲಿ ಪ್ರಮುಖ ಅಂಗವಾಗಿದ್ದ ಈ ಕ್ರೀಡೆ ನಡೆಯದಿರುವುದು ಕ್ರೀಡಾಭಿಮಾನಿಗಳು ಹಾಗೂ ಇತಿಹಾಸ ಪ್ರಿಯರಲ್ಲಿ ತೀವ್ರ ನಿರಾಸೆ ಮೂಡಿಸಿದೆ.




