
ಹುಬ್ಬಳ್ಳಿ : ಕಬ್ಬಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ನಿಗದಿಪಡಿಸಬೇಕು ಹಾಗೂ ಬಾಕಿ ಬಿಲ್ ಪಾವತಿಸಬೇಕೆಂದು ಒತ್ತಾಯಿಸಿ ರೈತರು ನಡೆಸುತ್ತಿರುವ ಹೋರಾಟ ತೀವ್ರಗೊಂಡಿದೆ. ಎಂ.ಕೆ. ಹುಬ್ಬಳ್ಳಿಯಿಂದ ಪ್ರಾರಂಭವಾಗಿರುವ ರೈತರ ಪಾದಯಾತ್ರೆ ಈಗ ನಿರ್ಣಾಯಕ ಹಂತ ತಲುಪಿದೆ.
ರೈತ ಸಂಘದ ಅಧ್ಯಕ್ಷ ಚೂನಪ್ಪ ಪೂಜಾರಿ ನೇತೃತ್ವದಲ್ಲಿ ಈ ಪಾದಯಾತ್ರೆ ನಡೆಯುತ್ತಿದ್ದು, ಹೋರಾಟದ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ವಿಶೇಷವಾಗಿ, ಪಾದಯಾತ್ರೆಯಲ್ಲಿ ಭಾಗವಹಿಸಿರುವ ರೈತ ಮುಖಂಡ ಪ್ರೇಮ್ ಚೌಗಲಾ ಅವರು ತಮ್ಮ ತಲೆ ಬೋಳಿಸಿಕೊಂಡು ಸರ್ಕಾರದ ವಿರುದ್ಧ ವಿಶಿಷ್ಟವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಾದಯಾತ್ರೆ ಸಾಗುವ ಮಾರ್ಗಮಧ್ಯೆ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಗ್ರಾಮದ ಬಳಿ ರೈತ ಮುಖಂಡರು ಮಹತ್ವದ ಸಭೆ ನಡೆಸುತ್ತಿದ್ದಾರೆ. ಇಂದಿನ ಸಭೆಯ ಬಳಿಕ ಸರ್ಕಾರದ ಧೋರಣೆಯ ವಿರುದ್ಧ ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ಮಧ್ಯಾಹ್ನ 2 ಗಂಟೆಗೆ ಅಧಿಕೃತ ಘೋಷಣೆ ಹೊರಡಿಸಲಿದ್ದಾರೆ.
ಅಲ್ಲದೆ, ಸಭೆಯ ನಂತರ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಮನೆ ಮುತ್ತಿಗೆ ಹಾಕುವ ಕುರಿತು ಅಥವಾ ಸರ್ಕಾರದ ವಿವಿಧ ನಾಯಕರ ವಿರುದ್ಧದ ಮುಂದಿನ ಹಂತದ ಪ್ರತಿಭಟನೆಯ ಬಗ್ಗೆಯೂ ಪ್ರಮುಖ ನಿರ್ಧಾರ ಪ್ರಕಟವಾಗುವ ಸಾಧ್ಯತೆಯಿದೆ. ರೈತರ ಉಲ್ಬಣಗೊಂಡಿರುವ ಆಕ್ರೋಶವನ್ನು ಶಮನ ಮಾಡಲು ಮತ್ತು ಅವರ ಬೇಡಿಕೆಗಳನ್ನು ಆಲಿಸಲು ಸರ್ಕಾರ ಮುಂದಾಗಿದೆ. ಇಂದು ಸಂಜೆ 4 ಗಂಟೆಗೆ ಪಾದಯಾತ್ರೆ ನಡೆಸುತ್ತಿರುವ ರೈತರನ್ನು ಭೇಟಿಯಾಗಲು ಮುಖ್ಯಮಂತ್ರಿಗಳು ಮುಂದಾಗಿದ್ದಾರೆ.
ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಬೆಳಗಾವಿಗೆ ಆಗಮಿಸಲಿರುವ ಸಿಎಂ, ಅಲ್ಲಿಂದ ರಸ್ತೆ ಮಾರ್ಗವಾಗಿ ಕಿತ್ತೂರಿನ ಅಂಬಡಗಟ್ಟಿ ಗ್ರಾಮಕ್ಕೆ ತಲುಪಲಿದ್ದಾರೆ. ಕಿತ್ತೂರಿನ ಅಂಬಡಗಟ್ಟಿ ಗ್ರಾಮದ ಕಲ್ಯಾಣ ಮಂಟಪದಲ್ಲಿ ರೈತ ಮುಖಂಡರೊಂದಿಗೆ ಸಿಎಂ ಸಭೆ ನಡೆಸಲಿದ್ದು, ಕಬ್ಬಿನ ಬೆಂಬಲ ಬೆಲೆ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆಯೇ ಎಂಬ ಕುತೂಹಲ ಮೂಡಿದೆ.




