ತಾರಕಕ್ಕೇರಿದ ಹುಬ್ಬಳ್ಳಿ ಅಸರ ಓಣಿಯ ಪುಷ್ಕರಣಿ ವಿವಾದ – ನಿಷೇಧಾಜ್ಞೆ ಜಾರಿ!
Hubballi Asara Oni temple tank dispute escalates – prohibitory orders imposed!

ಹುಬ್ಬಳ್ಳಿ : ನಗರದ ಅಸರ ಓಣಿಯಲ್ಲಿ ಪುಷ್ಕರಣಿ ಮೇಲೆ ರಸ್ತೆ ನಿರ್ಮಾಣ ಮಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ವಿವಾದ ತಾರಕಕ್ಕೇರಿದ್ದು, ಹಿಂದೂಪರ ಸಂಘಟನೆಗಳು ರಸ್ತೆ ತೆರವುಗೊಳಿಸುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ.
ಭದ್ರತೆಯ ದೃಷ್ಟಿಯಿಂದ ನಗರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಅಸರ ಓಣಿಯ ಪುಷ್ಕರಣಿ ಮೇಲೆ ರಸ್ತೆ ನಿರ್ಮಾಣ ಮಾಡುತ್ತಿರುವುದಕ್ಕೆ ಹಿಂದೂಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಅನಧಿಕೃತ ರಸ್ತೆಯನ್ನು ಕಿತ್ತುಹಾಕುವುದಾಗಿ ಎಚ್ಚರಿಕೆ ನೀಡಿವೆ. ರಸ್ತೆ ಕೀಳಲು ಬಿಡುವುದಿಲ್ಲ ಎಂದು ದಲಿತ ಹಾಗೂ ಮುಸ್ಲಿಂ ಸಂಘಟನೆಗಳು ಪಟ್ಟು ಹಿಡಿದಿವೆ.
ಹಿಂದೂ ಸಂಘಟನೆಗಳಿಂದ ‘ಪುಷ್ಕರಣಿ ಚಲೋ’ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ, ಮುಂಜಾಗ್ರತಾ ಕ್ರಮವಾಗಿ ನಾಳೆ ಬೆಳಗ್ಗೆ 6 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಸಂಘರ್ಷವನ್ನು ತಡೆಯಲು ಹು-ಧಾ ಪೊಲೀಸರಿಂದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದ್ದು, 1500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.
ಆರೋಗ್ಯ ಸಮಸ್ಯೆ ನಡುವೆಯೂ ಕರ್ತವ್ಯಕ್ಕೆ ಹಾಜರಾಗಿರುವ ಪೊಲೀಸ್ ಕಮಿಷನರ್ ಶಶಿಕುಮಾರ್ ಅವರು ಹುಬ್ಬಳ್ಳಿಯಲ್ಲಿ ರೂಟ್ ಮಾರ್ಚ್ ನಡೆಸಿ, ಪರಿಸ್ಥಿತಿಯ ಅವಲೋಕನ ನಡೆಸಿದ್ದಾರೆ ಹಾಗೂ ಸಾರ್ವಜನಿಕರು ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ.




