ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇನಲ್ಲಿ ಭೀಕರ ಅಪಘಾತ – ಇಬ್ಬರು ದುರ್ಮರಣ!
Terrible accident on Bengaluru-Mysore Expressway - Two dead!

ರಾಮನಗರ : ಬೆಂಗಳೂರು-ಮೈಸೂರು ದಶಪಥ ಎಕ್ಸ್ಪ್ರೆಸ್ವೇನಲ್ಲಿ ಇಂದು ಮುಂಜಾನೆ ಭೀಕರ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಇಬ್ಬರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.
ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ (KSRTC) ಸೇರಿದ ಬಸ್ ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲಿದ್ದ ಬೃಹತ್ ಸೈನ್ ಬೋರ್ಡ್ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
ಕೇರಳದಿಂದ ಬೆಂಗಳೂರಿನ ಕಡೆಗೆ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್, ರಾಮನಗರ ತಾಲೂಕಿನ ಅವರಗೆರೆ ಗೇಟ್ ಬಳಿ ತಲುಪುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿದೆ. ಅತೀವ ವೇಗದಲ್ಲಿದ್ದ ಬಸ್ ನೇರವಾಗಿ ಹೆದ್ದಾರಿ ಪಕ್ಕದಲ್ಲಿದ್ದ ದಿಕ್ಸೂಚಿ ಫಲಕಕ್ಕೆ ಜೋರಾಗಿ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಬಸ್ ರಸ್ತೆಯಲ್ಲೇ ಪಲ್ಟಿಯಾಗಿ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಅಪಘಾತದ ತೀವ್ರತೆಗೆ ಬಸ್ನಲ್ಲಿದ್ದ ಇಬ್ಬರು ಪ್ರಯಾಣಿಕರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಬಸ್ನಲ್ಲಿದ್ದ ಇತರ ಪ್ರಯಾಣಿಕರಿಗೆ ಸಣ್ಣಪುಟ್ಟ ಹಾಗೂ ಗಂಭೀರ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.




