ರಾಜ್ಯ

ಸಿಕ್ಕಿಂನಲ್ಲಿ ಸುರಂಗ ಕುಸಿತ – 10 ಕಾರ್ಮಿಕರ ಸಾವು, ಹಲವರು ಸಿಲುಕಿರುವ ಶಂಕೆ!

Tunnel collapse in Sikkim – 10 workers dead; many feared trapped!

ಸಿಕ್ಕಿಂ : ಸಿಕ್ಕಿಂನಲ್ಲಿ ನಿರ್ಮಾಣ ಹಂತದಲ್ಲಿದ್ದ ಸುರಂಗದಲ್ಲಿ ಸಂಭವಿಸಿದ ಭೀಕರ ಮೀಥೇನ್ ಅನಿಲ ಸ್ಫೋಟ ಹಾಗೂ ಭೂಕುಸಿತ ಸಂಭವಿಸಿದ್ದು, ಕನಿಷ್ಠ 10 ಕಾರ್ಮಿಕರು ಸಾವನ್ನಪ್ಪಿದ್ದಾರೆ. ಸುರಂಗದೊಳಗೆ ಇನ್ನೂ 27ಕ್ಕೂ ಹೆಚ್ಚು ಮಂದಿ ಸಿಲುಕಿಕೊಂಡಿದ್ದು, ರಕ್ಷಣಾ ಪಡೆಗಳಿಂದ ಕಾರ್ಯಾಚರಣೆ ಮುಂದುವರಿದಿದೆ.

ನಾಮ್ಚಿ ಜಿಲ್ಲೆಯಲ್ಲಿರುವ ರಾಷ್ಟ್ರೀಯ ಜಲವಿದ್ಯುತ್ ನಿಗಮದ (NHPC) ‘ತೀಸ್ತಾ ಹಂತ-6’ ಜಲವಿದ್ಯುತ್ ಯೋಜನೆಗಾಗಿ ಸುರಂಗ ಕೊರೆಯುವ ಕೆಲಸ ನಡೆಯುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ಘಟನೆಯ ವೇಳೆ ಎನ್‌ಎಚ್‌ಪಿಸಿ ಸಿಬ್ಬಂದಿ ಹಾಗೂ ಕಾರ್ಮಿಕರು ಸೇರಿದಂತೆ ಹಲವರು ಸುರಂಗದ ಆಳದಲ್ಲಿ ಕೆಲಸ ಮಾಡುತ್ತಿದ್ದರು. ಸುರಂಗ ಕೊರೆಯುವಾಗ ಇದ್ದಕ್ಕಿದ್ದಂತೆ ಮೀಥೇನ್ ಅನಿಲ ಸೋರಿಕೆಯಾಗಿ ಭಾರಿ ಪ್ರಮಾಣದ ಸ್ಫೋಟ ಸಂಭವಿಸಿದೆ.

ಸ್ಫೋಟದ ತೀವ್ರತೆಗೆ ಸುರಂಗದ ಮೇಲ್ಭಾಗ ಕುಸಿದು ಬಿದ್ದು, ಹೊರಬರುವ ಪ್ರಮುಖ ದಾರಿ ಸಂಪೂರ್ಣವಾಗಿ ಬಂದ್ ಆಗಿದೆ. ಸ್ಫೋಟ ಸಂಭವಿಸುತ್ತಿದ್ದಂತೆ ಕೆಲವೇ ಕೆಲವು ಕಾರ್ಮಿಕರು ತಕ್ಷಣವೇ ಹೊರ ಓಡಿ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಸುರಂಗದ ಆಳದಲ್ಲಿ ಕೆಲಸ ಮಾಡುತ್ತಿದ್ದ ಹಲವರು ಒಳಗೆಯೇ ಸಿಲುಕಿಕೊಂಡಿದ್ದಾರೆ.

ಸುರಂಗದಲ್ಲಿ ಆಮ್ಲಜನಕದ ಅಭಾವ, ದಟ್ಟ ಹೊಗೆ ಮತ್ತು ವಿಷಕಾರಿ ಅನಿಲದ ಪ್ರಮಾಣ ಹೆಚ್ಚಾಗಿರುವುದರಿಂದ ರಕ್ಷಣಾ ಸಿಬ್ಬಂದಿಗೂ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಗ್ಯಾಸ್ ಮಾಸ್ಕ್ ಮತ್ತು ವಿಶೇಷ ಉಪಕರಣಗಳನ್ನು ಧರಿಸಿ ರಕ್ಷಣಾ ಕಾರ್ಯಾಚರಣೆ ಮುಂದುವರಿಸಲಾಗಿದೆ.

Comments (0)

Your email address will not be published. Required fields are marked *

Back to top button