ಶ್ರೀಲಂಕಾ ಜೈಲಿನಲ್ಲಿ ಕೈದಿಗಳ ನಡುವೆ ಮಾರಾಮಾರಿ – 25 ಮಂದಿ ಸಾವು!
Clash between inmates in Sri Lankan prison – 25 prisoners dead!

ಕೊಲಂಬೊ: ಶ್ರೀಲಂಕಾದ ಜೈಲೊಂದರಲ್ಲಿ ಕೈದಿಗಳ ಎರಡು ಗುಂಪುಗಳ ನಡುವೆ ಭೀಕರ ಘರ್ಷಣೆ ಸಂಭವಿಸಿದ್ದು, ಈ ಹಿಂಸಾಚಾರದಲ್ಲಿ 25 ಕೈದಿಗಳು ಸಾವನ್ನಪ್ಪಿದ್ದು, 100ಕ್ಕೂ ಹೆಚ್ಚು ಜನರಿಗೆ ಗಾಯಗೊಂಡಿದ್ದಾರೆ.
ಸಾಮರ್ಥ್ಯ ಮೀರಿ ಅಧಿಕ ಖೈದಿಗಳಿರುವ ಈ ಜೈಲಿನಲ್ಲಿ ಭಾನುವಾರ ಎರಡು ಪ್ರತಿಸ್ಪರ್ಧಿ ಗುಂಪುಗಳ ನಡುವೆ ಘರ್ಷಣೆ ಭುಗಿಲೆದ್ದಿದೆ. ಗಲಭೆ ನಡೆಸುತ್ತಿದ್ದ ಕೈದಿಗಳು ಜೈಲಿನ ಬಂದೂಕುಗಳನ್ನು ವಶಪಡಿಸಿಕೊಂಡಿದ್ದರಿಂದ ಸೋಮವಾರ ಮತ್ತೆ ಸಂಘರ್ಷ ಭುಗಿಲೆದ್ದಿತು. ಆರಂಭದಲ್ಲಿ ಸಣ್ಣದಾಗಿ ಶುರುವಾದ ಜಗಳ ಇಂದು ಉಗ್ರ ರೂಪ ತಾಳಿ ಪರಸ್ಪರ ಮಾರಣಾಂತಿಕ ದಾಳಿ ನಡೆಸುವ ಹಂತಕ್ಕೆ ತಲುಪಿದೆ.
ಕೈದಿಗಳ ನಡುವಿನ ಈ ಭೀಕರ ಮಾರಾಮಾರಿಗೆ ನಿಖರವಾದ ಕಾರಣ ಏನೆಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಜೈಲಿನ ಒಳಗಿನ ಹಳೇ ವೈಷಮ್ಯ ಅಥವಾ ಗ್ಯಾಂಗ್‌ವಾರ್ ಇದಕ್ಕೆ ಕಾರಣವಿರಬಹುದು ಎಂದು ಶಂಕಿಸಲಾಗಿದೆ. ಸದ್ಯ ಉನ್ನತಾಧಿಕಾರಿಗಳು ಜೈಲಿನ ಆವರಣವನ್ನು ಸಂಪೂರ್ಣವಾಗಿ ತಮ್ಮ ಸುಪರ್ದಿಗೆ ಪಡೆದುಕೊಂಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆಯಲ್ಲಿ ಮೃತಪಟ್ಟವರು ಮತ್ತು ಗಾಯಗೊಂಡವರ ನಿಖರ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ.
ಘಟನೆಯ ಬೆನ್ನಲ್ಲೇ ನೆಗೊಂಬೊ ಜೈಲಿನ ಮುಖ್ಯ ದ್ವಾರದ ಹೊರಗೆ ಮತ್ತು ಒಳಗಡೆ ಭಾರಿ ಸಂಖ್ಯೆಯಲ್ಲಿ ಸಶಸ್ತ್ರ ಪೊಲೀಸರು ಹಾಗೂ ದಂಗೆ ನಿಯಂತ್ರಣ ಪಡೆಯನ್ನು ನಿಯೋಜಿಸಲಾಗಿದೆ. ಗಾಯಗೊಂಡ ಕೈದಿಗಳನ್ನು ಪೊಲೀಸ್ ಬಸ್‌ಗಳ ಮೂಲಕ ಸ್ಥಳೀಯ ಆಸ್ಪತ್ರೆಗಳಿಗೆ ಸಾಗಿಸಲಾಗುತ್ತಿದೆ.




