keralaರಾಜಕೀಯ

ಕೇರಳ ವಿಧಾನಸಭೆಯಲ್ಲಿ ಬಸವಣ್ಣನ ವಚನ: ಅಶ್ರಫ್ ಕನ್ನಡತನಕ್ಕೆ ಕರುನಾಡು ಹರ್ಷ!

ಕಾಸರಗೋಡು: ಕೇರಳ ವಿಧಾನಸಭೆಯ ಅಧಿವೇಶನದಲ್ಲಿ ಮತ್ತೊಮ್ಮೆ ಕನ್ನಡದ ಕಂಪು ಮತ್ತು ಸಾಂಸ್ಕೃತಿಕ ಸೌಹಾರ್ದತೆಯ ಅನಾವರಣವಾಗಿದೆ. ಗಡಿನಾಡು ಮಂಜೇಶ್ವರ ಕ್ಷೇತ್ರದ ಐಯುಎಂಎಲ್ (IUML) ಶಾಸಕ ಎ.ಕೆ.ಎಂ. ಅಶ್ರಫ್ ಅವರು ಜಗದ್ಗುರು ಬಸವಣ್ಣನವರ ಪ್ರಸಿದ್ಧ ವಚನವನ್ನು ಸದನದಲ್ಲಿ ಉಲ್ಲೇಖಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಆಡಳಿತಾರೂಢ ಯುಡಿಎಫ್ (UDF) ಮೈತ್ರಿಕೂಟವನ್ನು ಪ್ರತಿನಿಧಿಸುವ ಅಶ್ರಫ್ ಅವರು, ಮಂಜೇಶ್ವರ ಹಾಗೂ ಕಾಸರಗೋಡು ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುವಂತೆ ಸರ್ಕಾರವನ್ನು ಆಗ್ರಹಿಸುವ ಸಂದರ್ಭದಲ್ಲಿ ಬಸವಣ್ಣನವರ ಮಾನವೀಯ ಸಂದೇಶವನ್ನು ಬಳಸಿಕೊಂಡರು.

ಬಸವಣ್ಣನವರ ವಚನ ಪಠಿಸಿದ ಶಾಸಕ ಅಶ್ರಫ್

“ಇವನಾರವ ಇವನಾರವ ಇವನಾರವನೆಂದೆನಿಸದಿರಯ್ಯ, ಇವ ನಮ್ಮವ ಇವ ನಮ್ಮವ ಇವ ನಮ್ಮವನೆಂದೆನಿಸಯ್ಯ…” ಎನ್ನುವ ಬಸವಣ್ಣನವರ ಪ್ರಸಿದ್ಧ ವಚನವನ್ನು ಉಲ್ಲೇಖಿಸಿದರು. ಈ ಮೂಲಕ ಗಡಿಭಾಗದ ಜನರನ್ನು ಬೇರೆಯವರಂತೆ ನೋಡದೆ, “ನಮ್ಮವರು” ಎಂದು ಭಾವಿಸಿ ಕ್ಷೇತ್ರದ ಪ್ರಗತಿಗೆ ಹೆಚ್ಚಿನ ಆರ್ಥಿಕ ನೆರವು ಮತ್ತು ಅನುದಾನ ನೀಡಬೇಕು ಎಂದು ಭಾವನಾತ್ಮಕವಾಗಿ ಮನವಿ ಮಾಡಿದರು.

ಕಾಸರಗೋಡು ಕ್ಷೇತ್ರದ ಹಲವು ವರ್ಷಗಳ ಬೇಡಿಕೆಗಳನ್ನು ಸದನದ ಮುಂದಿಟ್ಟ ಶಾಸಕರು, ಪ್ರಮುಖವಾಗಿ ಈ ಕೆಳಗಿನ ಅಂಶಗಳಿಗೆ ಆದ್ಯತೆ ನೀಡಲು ಒತ್ತಾಯಿಸಿದರು

ಯುಡಿಎಫ್ ಸರ್ಕಾರ ಪರಿಗಣಿಸುತ್ತಿರುವ ಪ್ರಸ್ತಾವಿತ ಹೈಸ್ಪೀಡ್ ರೈಲು ಮಾರ್ಗವನ್ನು ಕೇವಲ ತಿರುವನಂತಪುರದಿಂದ ಕಣ್ಣೂರಿಗೆ ಸೀಮಿತಗೊಳಿಸಬಾರದು. ಅದನ್ನು ಕಾಸರಗೋಡಿನವರೆಗೂ ವಿಸ್ತರಿಸಬೇಕು.

ಕಳೆದ 10 ವರ್ಷಗಳಿಂದ ಕಾಸರಗೋಡು ಜಿಲ್ಲೆ ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಈಗಲಾದರೂ ವಿಶೇಷ ಆದ್ಯತೆ ನೀಡಬೇಕು.

ಜಿಲ್ಲೆಯ ವೈದ್ಯಕೀಯ ಕಾಲೇಜು ಹಾಗೂ ಮಂಜೇಶ್ವರಂ ತಾಲೂಕು ಕಚೇರಿಯ ನವೀಕರಣ ಕಾಮಗಾರಿಗಳಿಗೆ ಮೊದಲ ಆದ್ಯತೆಯ ಮೇಲೆ ಅನುದಾನ ಬಿಡುಗಡೆ ಮಾಡಬೇಕು.
ಶಾಸಕ ಎ.ಕೆ.ಎಂ. ಅಶ್ರಫ್ ಅವರಿಗೆ ಕನ್ನಡ ಭಾಷೆಯ ಮೇಲಿರುವ ಅಭಿಮಾನ ಹೊಸದೇನಲ್ಲ. 2021ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದಾಗಲೂ ಹಾಗೂ ಇತ್ತೀಚಿನ ವಿಧಾನಸಭಾ ಅಧಿವೇಶನದಲ್ಲೂ ಅವರು ಕನ್ನಡದಲ್ಲೇ ಪ್ರಮಾಣವಚನ ಸ್ವೀಕರಿಸಿ ಕನ್ನಡಿಗರ ಮನ ಗೆದ್ದಿದ್ದರು. ಇದೀಗ ಕೇರಳದ ಸದನದಲ್ಲಿ ಬಸವಣ್ಣನ ವಚನವನ್ನು ವಾಚಿಸುವ ಮೂಲಕ ಗಡಿನಾಡಿನಲ್ಲಿ ಕನ್ನಡದ ಅಸ್ಮಿತೆಯನ್ನು ಮತ್ತೊಮ್ಮೆ ಎತ್ತಿ ಹಿಡಿದಿದ್ದಾರೆ. ಶಾಸಕರ ಈ ನಡೆಗೆ ಗಡಿನಾಡ ಕನ್ನಡಿಗರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.

#AKMAshraf #Manjeshwar #BasavannaVachana #KeralaAssembly #KasaragodDevelopment #KannadaInKerala #UDF #GadinadaKannadiga #FreedomTV #KannadaPride

Comments (0)

Your email address will not be published. Required fields are marked *

Back to top button