
ಬೀದರ್: ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ, ಇದೀಗ ಹೊಸ ಸಚಿವ ಸಂಪುಟದಲ್ಲಿ ಉಪಮುಖ್ಯಮಂತ್ರಿ (DCM) ಸ್ಥಾನಕ್ಕಾಗಿ ಬೇಡಿಕೆಗಳ ಮಹಾಪೂರವೇ ಹರಿದುಬರುತ್ತಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರ ಅತ್ಯಂತ ಆಪ್ತರಾಗಿರುವ, ಪ್ರಭಾವಿ ನಾಯಕ ಹಾಗೂ ಸಚಿವ ಸಂತೋಷ್ ಲಾಡ್ ಅವರಿಗೆ ಈ ಬಾರಿ ಉಪಮುಖ್ಯಮಂತ್ರಿ ಸ್ಥಾನ ನೀಡಲೇಬೇಕು ಎಂದು ಮರಾಠಾ ಸಮುದಾಯ ರಾಜ್ಯ ಸರ್ಕಾರವನ್ನು ಕಟ್ಟುನಿಟ್ಟಾಗಿ ಒತ್ತಾಯಿಸಿದೆ. ದರ್ ನಗರದಲ್ಲಿ ಇಂದು ‘ಸಕಲ ಮರಾಠಾ ಸಮಾಜ’ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಲಾಗಿದ್ದ ಮಹತ್ವದ ಸುದ್ದಿಗೋಷ್ಠಿಯಲ್ಲಿ ಸಮುದಾಯದ ಮುಖಂಡರು ಹಾಗೂ ಸ್ವಾಮೀಜಿಗಳು ಈ ಜಂಟಿ ಒತ್ತಾಯವನ್ನು ಹೈಕಮಾಂಡ್ ಮುಂದಿಟ್ಟಿದ್ದಾರೆ.

ಬಡವರ ಬಂಧು ಸಂತೋಷ್ ಲಾಡ್: ದಾದಾ ಮಹಾರಾಜ್ ಸ್ವಾಮೀಜಿ ಶ್ಲಾಘನೆ!
ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಪರಮಪೂಜ್ಯ ಶ್ರೀ ದಾದಾ ಮಹಾರಾಜ್ ನಗರಕರ್ ಸ್ವಾಮೀಜಿಯವರು, ಸಂತೋಷ್ ಲಾಡ್ ಅವರ ಸಾಮಾಜಿಕ ಮತ್ತು ಜನಪರ ಕೆಲಸಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದರು.ಸಂತೋಷ್ ಲಾಡ್ ಫೌಂಡೇಶನ್ ಮೂಲಕ ರಾಜ್ಯದ ಬಡರೈತರಿಗೆ ಬರೋಬರಿ 10,000 ಉಚಿತ ಬೋರ್ವೆಲ್ಗಳನ್ನು ಕೊರೆಸಿಕೊಡುವ ಮೂಲಕ ಕೃಷಿಗೆ ಜೀವ ನೀಡಿದ್ದಾರೆ. ಸುಮಾರು 4,000 ಅಂಗವಿಕಲರಿಗೆ ವಿಕಲಚೇತನ ಉಚಿತ ವಾಹನಗಳನ್ನು ವಿತರಿಸಿದ್ದಾರೆ. ಜೊತೆಗೆ ಸಾವಿರಾರು ಬಡ ಕಾರ್ಮಿಕರ ಕುಟುಂಬಗಳಿಗೆ ಆರ್ಥಿಕ ನೆರವು ನೀಡಿದ್ದಾರೆ.
ಈ ಹಿಂದೆ ಮತ್ತು ಪ್ರಸ್ತುತ ಕಾರ್ಮಿಕ ಸಚಿವರಾಗಿ ಅವರು ಸಮಾಜದ ಕಟ್ಟಕಡೆಯ ಕಾರ್ಮಿಕರಿಗಾಗಿ ಅನೇಕ ಐತಿಹಾಸಿಕ ಮತ್ತು ಜನಪರ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿದ್ದಾರೆ.
“ಸಂತೋಷ್ ಲಾಡ್ ಅವರು ಕೇವಲ ರಾಜಕಾರಣಿಯಲ್ಲ, ಅವರು ಬುದ್ಧ, ಬಸವ, ಅಂಬೇಡ್ಕರ್ ಅವರ ಸಾಮಾಜಿಕ ಸಮಾನತೆಯ ವಿಚಾರಧಾರೆಗಳನ್ನು ಅಳವಡಿಸಿಕೊಂಡು ಕೆಲಸ ಮಾಡುತ್ತಿರುವ ಧೀಮಂತ ನಾಯಕ. ಇಂತಹ ಜನಪರ ನಾಯಕನಿಗೆ ಡಿಸಿಎಂ ಸ್ಥಾನ ಸಿಗಲೇಬೇಕು.” ಎಂದು ಶ್ರೀ ದಾದಾ ಮಹಾರಾಜ್ ನಗರಕರ್ ಸ್ವಾಮೀಜಿ ಒತ್ತಾಯಿಸಿದರು.
ರಾಜ್ಯದಲ್ಲಿ ಈಗಾಗಲೇ ಲಿಂಗಾಯತ, ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಂದ ಡಿಸಿಎಂ ಸ್ಥಾನಕ್ಕೆ ಭಾರಿ ಪೈಪೋಟಿ ಆರಂಭವಾಗಿದೆ. ಇದರ ನಡುವೆ ಉತ್ತರ ಕರ್ನಾಟಕ ಹಾಗೂ ಮರಾಠಾ ಸಮುದಾಯದಲ್ಲಿ ದೊಡ್ಡ ಹಿಡಿತ ಹೊಂದಿರುವ ಸಂತೋಷ್ ಲಾಡ್ ಅವರ ಪರವಾಗಿ ಬೀದರ್ನಿಂದ ಧ್ವನಿ ಕೇಳಿಬಂದಿರುವುದು ಕಾಂಗ್ರೆಸ್ ವಲಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಲಾಡ್ ಅವರಿಗೆ ಹೈಕಮಾಂಡ್ ಮಣೆ ಹಾಕುತ್ತಾ? ಹೊಸ ಸಿಎಂ ಡಿ.ಕೆ. ಶಿವಕುಮಾರ್ ಕ್ಯಾಬಿನೆಟ್ನಲ್ಲಿ ಸಂತೋಷ್ ಲಾಡ್ ಅವರ ಸ್ಥಾನಮಾನ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
#FreedomTV #SanthoshLadForDCM #MarathaSamaja #BidarPressMeet #DKShivakumarCabinet #SiddaramaiahCloseAide #KarnatakaPolitics #DCMDemand #SanthoshLadFoundation #BidarNews #CongressHighCommand #LaborMinister #PoliticalUpdatesಕನ್ನಡ




