
ಬೆಂಗಳೂರು: “ಕಾಂಗ್ರೆಸ್ ಸರ್ಕಾರದಲ್ಲಿ ಡ್ರೈವರ್ ಮಾತ್ರ ಬದಲಾಗಿದ್ದಾರೆ. ಆದರೆ ಬಸ್ ಮತ್ತು ಎಂಜಿನ್ ಎರಡೂ ಸಂಪೂರ್ಣವಾಗಿ ಕೆಟ್ಟು ಹೋಗಿದೆ. ಕೆಟ್ಟು ಹೋಗಿರುವ ಗಾಡಿಗೆ ಸಾಲ ಮಾಡಿ ಡೀಸೆಲ್ ಹಾಕಿಸುವಂತಹ ಪರಿಸ್ಥಿತಿಯನ್ನು ಸಿದ್ದರಾಮಯ್ಯ ಡಿ.ಕೆ. ಶಿವಕುಮಾರ್ ಅವರಿಗೆ ತಂದಿಟ್ಟಿದ್ದಾರೆ” ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತೀವ್ರ ವ್ಯಂಗ್ಯವಾಡಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ನಡೆದಿರುವ ನಾಯಕತ್ವ ಬದಲಾವಣೆ ಹಾಗೂ ಸರ್ಕಾರದ ಆರ್ಥಿಕ ವೈಫಲ್ಯಗಳ ಕುರಿತು ಸಾಲು ಸಾಲು ಆಸ್ತ್ರಗಳನ್ನು ಪ್ರಯೋಗಿಸಿ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಕಿಡಿಕಾರಿದರು.

3 ತಿಂಗಳು ಟೈಂ ಕೊಡಿ ಎಂದು ಭಿಕ್ಷೆ ಬೇಡಿದ್ದ ಸಿದ್ದರಾಮಯ್ಯ!
“ನಾನು ಅಹಿಂದ ನಾಯಕ, ದೇಶದಲ್ಲೇ ನಾನೊಬ್ಬನೇ ಅಹಿಂದ ಸಿಎಂ ಇರೋದು ಎಂದು ಸಿದ್ದರಾಮಯ್ಯ ಬೀಗುತ್ತಿದ್ದರು. ನನ್ನನ್ನು ಯಾರೂ ಬದಲಾವಣೆ ಮಾಡಲ್ಲ ಅನ್ನೋ ಅತಿಯಾದ ಆತ್ಮವಿಶ್ವಾಸದಲ್ಲಿದ್ದರು. ಆದರೆ ರಾಹುಲ್ ಗಾಂಧಿ ಕಿತಾಪತಿಯಿಂದ ಈಗ ಅವರ ಸ್ಥಾನ ಹೋಗಿದೆ” ಎಂದು ಅಶೋಕ್ ಆರೋಪಿಸಿದರು. ಅಧಿಕಾರದಿಂದ ಇಳಿಯುವ ಮುನ್ನ ತಮಗೆ ಕೇವಲ 3 ತಿಂಗಳು ಕಾಲಾವಕಾಶ ಕೊಡಿ ಎಂದು ಸಿದ್ದರಾಮಯ್ಯ ಹೈಕಮಾಂಡ್ ಮುಂದೆ ಭಿಕ್ಷೆ ಬೇಡಿದ್ದರು. ಆದರೆ ಹೈಕಮಾಂಡ್ 3 ತಿಂಗಳು ಹಾಗಿರಲಿ,3 ದಿನವೂ ಟೈಂ ಕೊಡಲ್ಲ ಎಂದು ಹೇಳಿ ಅವರ ಕೈಯಿಂದ ಬಲವಂತವಾಗಿ ರಾಜೀನಾಮೆ ಕೊಡಿಸಿದೆ. ಕುರುಬ ಸಮುದಾಯ ಹಾಗೂ ಹಿಂದುಳಿದ ವರ್ಗಗಳ ಜನ ಇವತ್ತು ಕಾಂಗ್ರೆಸ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಮುಂದಿನ ದಿನಗಳಲ್ಲಿ ಇವರಿಗೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ.” ಎಂದು ಆರ್. ಅಶೋಕ್ ಲೇವಡಿ ಮಾಡಿದರು.
ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿರೋಧಿ!
ಕಾಂಗ್ರೆಸ್ ಪಕ್ಷದ ಇತಿಹಾಸವನ್ನು ಕೆದಕಿದ ಆರ್. ಅಶೋಕ್, ನೆಹರೂ-ಗಾಂಧಿ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದರು.ಇತಿಹಾಸದ ನೆನಪು: ಹಿಂದೆ ರಾಜೀವ್ ಗಾಂಧಿಯವರು ವೀರೇಂದ್ರ ಪಾಟೀಲ್ ಅವರನ್ನು ಕಿತ್ತುಹಾಕಿದ್ದರು. ಇಂದಿರಾ ಗಾಂಧಿಯವರು ದೇವರಾಜ್ ಅರಸ್ ಹಾಗೂ ಬಂಗಾರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ್ದರು. ದೇವರಾಜ್ ಅರಸ್, ಬಂಗಾರಪ್ಪ, ಸಿದ್ದರಾಮಯ್ಯ ಅವರೆಲ್ಲರೂ ಹಿಂದುಳಿದ ವರ್ಗದ ನಾಯಕರು. ದೇಶದಲ್ಲಿ ಬ್ಯಾಕ್ವರ್ಡ್ (ಬಹಿಷ್ಕೃತ/ಹಿಂದುಳಿದ) ಸಮುದಾಯದ ನಾಯಕರನ್ನು ‘ಹಿಮ್ಮೆಟ್ಟಿಸುವುದೇ ಕಾಂಗ್ರೆಸ್ ಅಸಲಿ ಸಂಸ್ಕೃತಿ ಎಂದು ಅವರು ಆಕ್ರೋಶ ಹೊರಹಾಕಿದರು.
‘ಸಮೃದ್ಧ ಕರ್ನಾಟಕ’ ಈಗ ‘ಸಾಲದ ಕರ್ನಾಟಕ’ – ಆಲಿಬಾಬಾ 40 ಕಳ್ಳರು!
ರಾಜ್ಯದ ಆರ್ಥಿಕ ಪರಿಸ್ಥಿತಿಯ ಬಿಕ್ಕಟ್ಟನ್ನು ತೆರೆದಿಟ್ಟ ವಿಪಕ್ಷ ನಾಯಕರು, “ಸಿಎಂ ಬದಲಾವಣೆ ಆದ ತಕ್ಷಣ ಫೈನಾನ್ಸ್ನಲ್ಲಿರುವ ಲೆಕ್ಕಪತ್ರ ಬದಲಾಗುತ್ತಾ? ಇವತ್ತು ಕರ್ನಾಟಕದ ಒಟ್ಟು ಸಾಲ 754 ಲಕ್ಷ ಕೋಟಿ ರೂಪಾಯಿಗೆ ಬಂದು ನಿಂತಿದೆ. ಆದಾಯಕ್ಕಿಂತ ಸಾಲವೇ ಹೆಚ್ಚಾಗಿದೆ. ನಾವು ಬೊಮ್ಮಾಯಿ ಅವರ ನೇತೃತ್ವದಲ್ಲಿ ಸಮೃದ್ಧ, ಸರ್ಪ್ಲಸ್ ಬಜೆಟ್ ಹೊಂದಿದ್ದ ಕರ್ನಾಟಕವನ್ನು ಕಾಂಗ್ರೆಸ್ಗೆ ಕೊಟ್ಟಿದ್ದೆವು. ಆದರೆ ಇವರು ಆಲಿಬಾಬಾ ಮತ್ತು 40 ಕಳ್ಳರ ತರಹ ಇಡೀ ಆರ್ಥಿಕತೆಯನ್ನು ಹಾಳು ಮಾಡಿದ್ದಾರೆ” ಎಂದು ದೂರಿದರು. ನಾವು ಅಧಿಕಾರದಲ್ಲಿದ್ದಾಗ ಪ್ರತಿ ವರ್ಷ ಅಭಿವೃದ್ಧಿ ಕೆಲಸಗಳಿಗಾಗಿ 86 ಸಾವಿರ ಕೋಟಿ ರೂ. ಖರ್ಚು ಮಾಡುತ್ತಿದ್ದೆವು. ಆದರೆ ಕಾಂಗ್ರೆಸ್ ತಂದ ಅವೈಜ್ಞಾನಿಕ ಗ್ಯಾರಂಟಿಗಳಿಂದಾಗಿ ಇಂದು ಅಭಿವೃದ್ಧಿಗೆ ಬಿಡಿಗಾಸೂ ಇಲ್ಲದಂತಾಗಿದೆ. ರಸ್ತೆಗಳು ಹಾಳಾಗಿವೆ, ಬೆಂಗಳೂರಿನಲ್ಲಿ ಕಸದ ವಾಸನೆ ಬರುತ್ತಿದೆ. ಈ ಸರ್ಕಾರ ಐಸಿಯು (ICU) ನಲ್ಲಿದೆ. ಅದಕ್ಕೆ ಬೇಕಾದ ಆಕ್ಸಿಜನ್ ಖರೀದಿಸಲು ಇವರು ಸಾಲ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ದೇಶದ ಅಭಿವೃದ್ಧಿಗಾಗಿ ಸಾಲ ಮಾಡಿದರೆ, ಕಾಂಗ್ರೆಸ್ ಕೇವಲ ಗ್ಯಾರಂಟಿಗಳಿಗೆ ಸಾಲ ಮಾಡುತ್ತಿದೆ ಎಂದು ಟೀಕಿಸಿದರು.
“ಡಿಕೆ ಎಂದರೆ ಇನ್ಮುಂದೆ Tax ಎಂದರ್ಥ!”
ಸಿದ್ದರಾಮಯ್ಯ ಅವರು ತಮ್ಮ ಮೇಲಿರುವ ಹಗರಣಗಳ ಅಪರಾಧ ಪ್ರಜ್ಞೆಯಿಂದ ಮುಕ್ತರಾಗಲು ಸೈಲೆಂಟ್ ಆಗಿ ಅಧಿಕಾರ ಬಿಟ್ಟುಕೊಟ್ಟಿದ್ದಾರೆ ಎಂದ ಅಶೋಕ್, ನಿಯೋಜಿತ ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ನೇರ ಪ್ರಶ್ನೆ ಹಾಕಿದರು. “ಡಿಕೆಶಿಯವರೇ, ಈ 754 ಲಕ್ಷ ಕೋಟಿ ರೂ. ಸಾಲವನ್ನು ಮುಂದಿನ ಪೀಳಿಗೆ ತೀರಿಸಬೇಕಾ ಅಥವಾ ನೀವೇ ತೀರಿಸ್ತೀರಾ? ಮೇಕೆದಾಟು, ಕೃಷ್ಣಾ ಯೋಜನೆಗಳಿಗೆ ಹಣ ಎಲ್ಲಿಂದ ತರುತ್ತೀರಿ? ಡಿ.ಕೆ. ಶಿವಕುಮಾರ್ ಅವರಿಗೆ ಸಿಎಂ ಆಗುವ ವೈಯಕ್ತಿಕ ಕನಸು ನನಸಾಗಿ ಲಾಭ ಆಗಿರಬಹುದು. ಆದರೆ ಕರ್ನಾಟಕದ ಜನತೆಗೆ ಇನ್ನು ಮುಂದೆ ಭಾರಿ ತೆರಿಗೆ ಹೊರೆ ಬೀಳಲಿದೆ. ಇನ್ಮುಂದೆ ಡಿ.ಕೆ ಎಂದರೆ ‘ಡಿಕೆ’ ಅಲ್ಲ, ಡಿ.ಕೆ ಎಂದರೆ ‘ಟ್ಯಾಕ್ಸ್'” ಎಂದು ಆರ್. ಅಶೋಕ್ ವಾಗ್ದಾಳಿ ನಡೆಸಿದರು.
#FreedomTV #RAshok #Siddaramaiah #DKShivakumar #KarnatakaPolitics #CongressDriverChanged #RahulGandhi #AhindaLeader #KarnatakaDebt #GarbageCity #TaxTerror #NewCMDKS #BreakingNewsಕನ್ನಡ #PoliticalUpdates




