Kalburgiರಾಜಕೀಯ

ಮೋದಿ ಕೇವಲ ಮಾತಿನ ಮಲ್ಲ ಅಭಿವೃದ್ದಿಯೇ ಇಲ್ಲ- ಮಲ್ಲಿಕಾರ್ಜುನ್ ಖರ್ಗೆ ಕಿಡಿ!

AICC kharge slams central government

ಕಲಬುರಗಿ: ದಿನದಿಂದ ದಿನಕ್ಕೆ ಗಗನಕ್ಕೇರುತ್ತಿರುವ ವಾಣಿಜ್ಯ ಸಿಲಿಂಡರ್, ಪೆಟ್ರೋಲ್ ಹಾಗೂ ಡೀಸೆಲ್ ದರ ಏರುತ್ತಿದೆ. ಜನರ ಜೇಬು ಖಾಲಿಯಾಗಿ ಹೋಗಿದೆ. ಬೆಲೆ ಏರಿಕೆಯನ್ನು ಖಂಡಿಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಕಲಬುರಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರಕ್ಕೆ ದೇಶದ ಜನರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ, ಕೇವಲ ಮಾತುಗಳಲ್ಲೇ ಕಾಲ ಕಳೆಯುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಜನರ ನಂಬಿಕೆಗೆ ಮೋದಿ ಮಹಾನ್ ದ್ರೋಹ: ಖರ್ಗೆ ಆಕ್ರೋಶ


“ದೇಶದ ಜನ ನರೇಂದ್ರ ಮೋದಿ ಅವರಿಗೆ ಆಶೀರ್ವಾದ ಮಾಡಿ ಅಧಿಕಾರ ನೀಡಿದ್ದಾರೆ. ಆದರೆ ಇವತ್ತು ಪ್ರಧಾನಿ ಮೋದಿ ಒಂದು ದಿನ ಬಿಟ್ಟು ಒಂದು ದಿನ ಬೆಲೆ ಏರಿಕೆ ಮಾಡುವ ಮೂಲಕ ಜನರ ಮೇಲೆ ಭಾರಿ ಆರ್ಥಿಕ ಹೊರೆ ಹೇರುತ್ತಿದ್ದಾರೆ. ಗ್ಯಾಸ್ ಬೆಲೆ, ಪೆಟ್ರೋಲ್ ಬೆಲೆ ಪ್ರತಿಯೊಂದೂ ದುಬಾರಿಯಾಗುತ್ತಿದೆ. ಈ ಮೂಲಕ ಕೇಂದ್ರ ಸರ್ಕಾರ ಜನರ ವಿಶ್ವಾಸವನ್ನು ಸಂಪೂರ್ಣವಾಗಿ ಕಳೆದುಕೊಳ್ಳುತ್ತಿದೆ” ಎಂದು ಖರ್ಗೆ ಹೇಳಿದರು. “ಪ್ರಧಾನಿ ಮೋದಿ ಕೇವಲ ಮಾತಿನಿಂದಲೇ ಪ್ರತಿಯೊಬ್ಬರನ್ನೂ ಸಮಾಧಾನಪಡಿಸಲು ಯತ್ನಿಸುತ್ತಿದ್ದಾರೆ. ಆದರೆ ಸಮಸ್ಯೆಗಳಿಗೆ ಪರಿಹಾರ ಕೊಡುವ ಕೆಲಸವನ್ನು ಮಾತ್ರ ಮಾಡುತ್ತಿಲ್ಲ. ಅವರು ಕೇವಲ ‘ಮಾತಿನ ಮಲ್ಲ’ ಅಷ್ಟೇ!” ಎಂದು ದೂರಿದರು.

ವಿರೋಧ ಪಕ್ಷದ ಮೇಲೆ ಗೂಬೆ ಕೂರಿಸುವ ತಂತ್ರ!
ಕೇಂದ್ರದ ವೈಫಲ್ಯಗಳನ್ನು ಮುಚ್ಚಿಟ್ಟುಕೊಳ್ಳಲು ಬಿಜೆಪಿ ಸದಾ ವಿರೋಧ ಪಕ್ಷಗಳನ್ನು ದೂಷಿಸುತ್ತಿದೆ ಎಂದು ಖರ್ಗೆ ಕಿಡಿಕಾರಿದರು. ಅಭಿವೃದ್ಧಿಗೆ ಅಸಹಕಾರ ಆರೋಪ ಸುಳ್ಳು: ವಿರೋಧ ಪಕ್ಷಗಳು ದೇಶದ ಅಭಿವೃದ್ಧಿಗೆ ಸಹಕಾರ ನೀಡುತ್ತಿಲ್ಲ ಎಂದು ಪ್ರಧಾನಿ ಆರೋಪಿಸುತ್ತಾರೆ. ಆದರೆ ವಿರೋಧ ಪಕ್ಷವಾದ ನಾವು ಯಾವಾಗಲೂ ದೇಶದ ಪರವಾಗಿಯೇ ಇದ್ದೇವೆ. ಜನರ ಹಿತಕ್ಕಾಗಿ ಧ್ವನಿ ಎತ್ತುತ್ತಿದ್ದೇವೆ. ಕೇಂದ್ರ ಸರ್ಕಾರ ಘೋಷಿಸುವ ಪ್ರತಿಯೊಂದು ಕಾರ್ಯಕ್ರಮಗಳೂ ಇವತ್ತು ಸಂಪೂರ್ಣವಾಗಿ ವಿಫಲವಾಗುತ್ತಿವೆ.
ದೇಶದ ಪ್ರಸಕ್ತ ಆರ್ಥಿಕ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಎಐಸಿಸಿ ಅಧ್ಯಕ್ಷರು, ಅಂತರರಾಷ್ಟ್ರೀಯ ಮಟ್ಟದಲ್ಲಿ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ದಿನದಿಂದ ದಿನಕ್ಕೆ ತಳ ಮುಟ್ಟುತ್ತಿದೆ ಎಂದರು. ದೇಶದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದ್ದರೂ ಕೇಂದ್ರ ಸರ್ಕಾರಕ್ಕೆ ಅದರ ಬಗ್ಗೆ ಚಿಂತೆ ಇಲ್ಲ. ನಾವು ಹಿಂದೆ ಬಡವರಿಗಾಗಿ ತಂದಿದ್ದ ಐತಿಹಾಸಿಕ ‘ಮನರೇಗಾ’ (ಉದ್ಯೋಗ ಖಾತ್ರಿ) ಯೋಜನೆಯನ್ನು ಕೂಡ ಈ ಸರ್ಕಾರ ಇವತ್ತು ಬಂದ್ ಮಾಡಿದೆ ಎಂದು ಆರೋಪಿಸಿದರು.

ಪ್ರತಿಯೊಂದು ರಂಗದಲ್ಲೂ ವಿಫಲವಾಗಿರುವ ಈ ಸರ್ಕಾರಕ್ಕೆ ಕೇವಲ ರಾಜಕಾರಣ ಮಾಡುವುದಷ್ಟೇ ಗೊತ್ತು, ಬಡವರ ಬದುಕಿನ ಬಗ್ಗೆ ಕಾಳಜಿಯಿಲ್ಲ ಎಂದು ಮಲ್ಲಿಕಾರ್ಜುನ್ ಖರ್ಗೆ ತೀವ್ರ ತರಾಟೆಗೆ ತೆಗೆದುಕೊಂಡರು.

#FreedomTV #MallikarjunKharge #Kalaburagi #Congress #AICC #ModiGovt #LPGPriceHike #CommercialCylinder #PetrolPriceHike #Inflation #Unemployment #RupeeVsDollar #MNREGA #KarnatakaNews #PoliticalUpdates

Comments (0)

Your email address will not be published. Required fields are marked *

Back to top button