BELAGAVIbengaluruರಾಜಕೀಯ

ಸಿದ್ದರಾಮಯ್ಯನವರು ಹುದ್ದೆಯಿಂದ ಇಳಿದಿರಬಹುದು ಜನಮಾನಸದಿಂದಲ್ಲ- ಲಕ್ಷ್ಮೀ ಹೆಬ್ಬಾಳ್ಕರ್!

Lakshmi hebbalkar posts that siddu might have lost cm post not the love from the lovers

ಬೆಳಗಾವಿ/ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ‘ಸಿದ್ದು ಯುಗ’ ಮುಕ್ತಾಯಗೊಂಡಿದೆ. ಡಿಕೆ ಯುಗ ಪ್ರಾರಂಭವಾಗಿದೆ. ನಿಕಟಪೂರ್ವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಹಂಚಿಕೊಂಡಿರುವ ಸಾಮಾಜಿಕ ಜಾಲತಾಣದ ಪೋಸ್ಟ್ ಒಂದು ಭಾರಿ ಸಂಚಲನ ಸೃಷ್ಟಿಸಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿದ ಬೆನ್ನಲ್ಲೇ, ಹೆಬ್ಬಾಳ್ಕರ್ ತಮ್ಮ ನೆಚ್ಚಿನ ನಾಯಕನ ಆಡಳಿತ ವೈಖರಿ ಮತ್ತು ವ್ಯಕ್ತಿತ್ವವನ್ನು ನೆನೆದು ಕಣ್ಣೀರು ತರಿಸುವಂತಹ ಭಾವನಾತ್ಮಕ ಸಂದೇಶವೊಂದನ್ನು ಬರೆದುಕೊಂಡಿದ್ದಾರೆ.

“ಜನಮನದಲ್ಲಿ ಶಾಶ್ವತವಾಗಿ ಉಳಿಯುವ ನಾಯಕನಿಗೆ ವಿದಾಯ ಇರಲ್ಲ”


ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸಿದ್ದರಾಮಯ್ಯ ಅವರ ರಾಜಕೀಯ ಹೋರಾಟದ ಹಾದಿಯನ್ನು ಶ್ಲಾಘಿಸುತ್ತಾ, ಅಧಿಕಾರಕ್ಕಿಂತ ಜನರ ಪ್ರೀತಿ ದೊಡ್ಡದು ಎಂದಿದ್ದಾರೆ. “ರಾಜಕೀಯದಲ್ಲಿ ಸ್ಥಾನಗಳು ಬದಲಾಗಬಹುದು, ಆದರೆ ಜನಮನದಲ್ಲಿ ಶಾಶ್ವತವಾಗಿ ಉಳಿಯುವ ನಾಯಕನಿಗೆ ಎಂದಿಗೂ ವಿದಾಯ ಇರುವುದಿಲ್ಲ. ಇಂದು ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರಬಹುದು. ಆದರೆ, ಒಂದು ಹುದ್ದೆಯಿಂದ ಇಳಿಯುವುದು ಮತ್ತು ಜನರ ಹೃದಯದಿಂದ ಇಳಿಯುವುದು ಎರಡು ಬೇರೆ ಬೇರೆ ಸಂಗತಿಗಳು. ಸಿದ್ದರಾಮಯ್ಯನವರು ಎಂದಿಗೂ ಜನರ ಹೃದಯದಿಂದ ಕೆಳಗಿಳಿಯಲು ಸಾಧ್ಯವಿಲ್ಲ.”

ಬಡವರ ಭರವಸೆ, ಕನ್ನಡಿಗರ ಆತ್ಮವಿಶ್ವಾಸವಾಗಿದ್ದ ‘ಸಿದ್ದು’
ಮೈಸೂರಿನ ಹಳ್ಳಿಯೊಂದರ ಸಾಮಾನ್ಯ ರೈತ ಕುಟುಂಬದಿಂದ ಬಂದ ಸಿದ್ದರಾಮಯ್ಯ ಅವರು, ರಾಜ್ಯದ ಅತ್ಯುನ್ನತ ಸಿಎಂ ಗಾದಿ ಏರಿದರೂ ತಮ್ಮ ಸಿದ್ಧಾಂತವನ್ನು ಬಿಟ್ಟುಕೊಡಲಿಲ್ಲ ಎಂದು ಹೆಬ್ಬಾಳ್ಕರ್ ಸ್ಮರಿಸಿದ್ದಾರೆ. “ತಮ್ಮ ಅಧಿಕಾರದ ಕೊನೆಯ ಕ್ಷಣದವರೆಗೂ ಬಡವರ, ಹಿಂದುಳಿದವರ, ಶೋಷಿತರ ಮತ್ತು ದುರ್ಬಲರ ಧ್ವನಿಯಾಗಿಯೇ ಉಳಿದವರು ಸನ್ಮಾನ್ಯ ಸಿದ್ದರಾಮಯ್ಯನವರು. ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಸಾಮಾಜಿಕ ನ್ಯಾಯ, ಸಮಾನ ಅವಕಾಶ ಮತ್ತು ಜನಪರ ಆಡಳಿತದ ಹೆಸರಿನಲ್ಲಿ ಅವರು ಬರೆದ ಅಧ್ಯಾಯ ಎಂದೆಂದಿಗೂ ಅಳಿಸಲಾಗದಂತಹದ್ದು. ಅವರು ಕೇವಲ ಮುಖ್ಯಮಂತ್ರಿ ಆಗಿರಲಿಲ್ಲ; ಅನೇಕ ಬಡ ಕುಟುಂಬಗಳ ಭರವಸೆ, ಅಸಂಖ್ಯಾತ ಯುವಕರ ಕನಸು ಮತ್ತು ಕೋಟ್ಯಂತರ ಕನ್ನಡಿಗರ ಆತ್ಮವಿಶ್ವಾಸವಾಗಿದ್ದರು” ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಕೊಂಡಾಡಿದ್ದಾರೆ.

ರಾಜ್ಯದಲ್ಲಿ ನೂತನ ಸಂಪುಟ ರಚನೆಯ ಕಸರತ್ತು ತಾರಕಕ್ಕೇರಿದ್ದು, ಶಾಸಕರು ಸಚಿವ ಸ್ಥಾನಕ್ಕಾಗಿ ಹರಸಾಹಸ ಪಡುತ್ತಿದ್ದಾರೆ. ಇಂತಹ ಹೊತ್ತಿನಲ್ಲಿ ಬೆಳಗಾವಿ ಭಾಗದ ಪ್ರಭಾವಿ ನಾಯಕಿಯಾಗಿರುವ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸಿದ್ದರಾಮಯ್ಯ ಅವರ ಪರವಾಗಿ ಇಷ್ಟೊಂದು ಭಾವುಕ ಪೋಸ್ಟ್ ಹಾಕಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಇದು ಕೇವಲ ಕೃತಜ್ಞತೆಯ ಪೋಸ್ಟ್ ಆಗಿದೆಯೋ ಅಥವಾ ಮುಂಬರುವ ಹೊಸ ಸರ್ಕಾರದಲ್ಲಿ ತಮ್ಮ ರಾಜಕೀಯ ನಿಲುವಿನ ಮುನ್ಸೂಚನೆಯೋ ಎಂಬ ಚರ್ಚೆ ಕೂಡ ಆರಂಭವಾಗಿದೆ.

#Siddaramaiah #LakshmiHebbalkar #SiddaramaiahResigns #EmotionalPost #KarnatakaPolitics #FreedomTV #BreakingNews #SocialJustice #BelagaviNews #Bengaluru #CongressGovernment #JanaparaNayaka #AhindaLeader

Comments (0)

Your email address will not be published. Required fields are marked *

Back to top button