bengaluruರಾಜಕೀಯ

ಕಾಂಗ್ರೆಸ್ ಬಲಗೊಳ್ಳಲು ಪ್ರಿಯಾಂಕ್ ಖರ್ಗೆಗೆ ‘ಡಿಸಿಎಂ’ ಸ್ಥಾನ ನೀಡಿ- ಗುತ್ತೇದಾರ್!

MLC jagadev guttedar urges for Priyank kharge must be DCM

ಬೆಂಗಳೂರು: ಸಿದ್ದರಾಮಯ್ಯ ರಾಜೀನಾಮೆ ನೀಡಿದ ನಂತರ ರಾಜ್ಯ ರಾಜಕಾರಣದಲ್ಲಿ ನೂತನ ಸಂಪುಟ ರಚನೆಯ ಕಸರತ್ತು ಅತ್ಯಂತ ತೀವ್ರಗೊಂಡಿದೆ. ಡಿ.ಕೆ. ಶಿವಕುಮಾರ್ ನೇತೃತ್ವದ ಮುಂಬರುವ ಹೊಸ ಸರ್ಕಾರದಲ್ಲಿ ಸಚಿವ ಸ್ಥಾನಕ್ಕಾಗಿ ಓಟ ಆರಂಭವಾಗಿದ್ದು, ಇದೀಗ ಸಚಿವ ಪ್ರಿಯಾಂಕ್ ಖರ್ಗೆಅವರಿಗೆ ಉಪಮುಖ್ಯಮಂತ್ರಿ (DCM) ಸ್ಥಾನ ನೀಡಬೇಕು ಎಂಬ ಪ್ರಬಲ ಒತ್ತಾಯ ಕಾಂಗ್ರೆಸ್ ವಲಯದಿಂದ ಕೇಳಿಬಂದಿದೆ. ಮಾಧ್ಯಮಗಳೊಂದಿಗೆ ಮಾತನಾಡಿದ ಕಾಂಗ್ರೆಸ್ ಎಂಎಲ್‌ಸಿ ಜಗದೇವ್ ಗುತ್ತೇದಾರ್, ಪ್ರಿಯಾಂಕ್ ಅವರಿಗೆ ಡಿಸಿಎಂ ಪಟ್ಟ ನೀಡುವಂತೆ ಹೈಕಮಾಂಡ್‌ಗೆ ನೇರ ಒತ್ತಾಯ ಹೇರಿದ್ದಾರೆ.

ನಮ್ಮ ಪ್ರಿಯಾಂಕ್ ಖರ್ಗೆ ಸಾಹೇಬರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಿದರೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮತ್ತಷ್ಟು ಬಲಗೊಳ್ಳುತ್ತದೆ. ವಿರೋಧ ಪಕ್ಷಗಳಾದ ಬಿಜೆಪಿ-ಜೆಡಿಎಸ್ ನಮ್ಮ ಪಕ್ಷ ಅಥವಾ ಸರ್ಕಾರದ ಮೇಲೆ ದಾಳಿ ಮಾಡಿದಾಗ, ಅದಕ್ಕೆ ತಕ್ಷಣವೇ ಪ್ರತಿಕ್ರಿಯಿಸುವ ಮತ್ತು ತಾರ್ಕಿಕವಾಗಿ ತಿರುಗೇಟು ನೀಡುವ ಏಕೈಕ ನಾಯಕ ಎಂದರೆ ಅದು ಪ್ರಿಯಾಂಕ್ ಖರ್ಗೆ ಮಾತ್ರ. ಅವರ ಹೋರಾಟದ ಗುಣಕ್ಕೆ ತಕ್ಕಂತೆ ಅವರಿಗೆ ಡಿಸಿಎಂ ಸ್ಥಾನ ನೀಡಲೇಬೇಕು.” ಎಂದರು.

ರಾಜಭವನಕ್ಕೆ ಡಿಕೆಶಿ ಎಂಟ್ರಿ – ಸಂಜೆ ಸಿಎಲ್‌ಪಿ ಸಭೆ!
ಮತ್ತೊಂದೆಡೆ, ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲು ಸಜ್ಜಾಗಿರುವ ಡಿ.ಕೆ. ಶಿವಕುಮಾರ್ ಅವರು ಈಗಾಗಲೇ ರಾಜಭವನಕ್ಕೆ ತೆರಳಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿದ್ದಾರೆ. ಇಂದು ಸಂಜೆ ನಡೆಯಲಿರುವ ಮಹತ್ವದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯ ಕುರಿತು ಅವರು ರಾಜ್ಯಪಾಲರಿಗೆ ಮಾಹಿತಿ ನೀಡಿದ್ದಾರೆ. ಈ ಸಭೆಯ ಬಳಿಕ ಹೊಸ ಸಚಿವರ ಪಟ್ಟಿ ಅಧಿಕೃತಗೊಳ್ಳಲಿದೆ.

ಸಂಪುಟ ರಚನೆಯ ಈ ಮಹಾ ಕಸರತ್ತಿನ ನಡುವೆಯೇ ವಿರೋಧ ಪಕ್ಷವಾದ ಬಿಜೆಪಿ ಕಾಂಗ್ರೆಸ್ ವಿರುದ್ಧ ತನ್ನ ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವಿನ ನಿರಂತರ “ಕುರ್ಚಿ ಜಗಳ ಮತ್ತು ಒಳಜಗಳ” ಇಡೀ ರಾಜ್ಯದ ಆಡಳಿತ ವ್ಯವಸ್ಥೆಯ ಮೇಲೆ ಭಾರಿ ದುಷ್ಪರಿಣಾಮ ಬೀರಿದೆ ಎಂದು ಬಿಜೆಪಿ ನಾಯಕರು ಕಟುವಾಗಿ ಟೀಕಿಸಿದ್ದಾರೆ.

ಪ್ರಿಯಾಂಕ್ ಖರ್ಗೆ ಅವರಿಗೆ ಡಿಸಿಎಂ ಸ್ಥಾನ ನೀಡುವಂತೆ ಮಲ್ಲಿಕಾರ್ಜುನ ಖರ್ಗೆ ಅವರ ತವರು ನೆಲವಾದ ಕಲ್ಯಾಣ ಕರ್ನಾಟಕ ಭಾಗದ ನಾಯಕರು ಪಟ್ಟು ಹಿಡಿದಿರುವುದು, ಹೊಸ ಸಿಎಂ ಡಿಕೆಶಿಗೆ ಮತ್ತೊಂದು ತಲೆನೋವಾಗಿ ಪರಿಣಮಿಸಲಿದೆಯೇ ಎಂಬ ಕುತೂಹಲ ಈಗ ಮೂಡಿದೆ.

#PriyankKharge #DKShivakumar #KarnatakaCabinet #PriyankKhargeForDCM #KarnatakaPolitics #CongressCLPMeeting #FreedomTV #BreakingNews #KalyanaKarnataka #JagadevGuttedar #BJPvsCongress #BengaluruNews #ThawarChandGehlot

Comments (0)

Your email address will not be published. Required fields are marked *

Back to top button