ಅತ್ತ ಬೋನಿನಲ್ಲಿ ಚಿರತೆ, ಇತ್ತ ಕರಡಿ ದಾಳಿ, ಮಂದಿರದಲ್ಲಿ ಮಂಗಳಮುಖಿಯರ ರಾದ್ಧಾಂತ!
Leapord caught Beer attack and Transgender torture at huligemma temple in Koppal

ಕೊಪ್ಪಳ: ಜಿಲ್ಲೆಯಲ್ಲಿ ಇಂದು ಸಾರ್ವಜನಿಕರನ್ನು ಸಮಾಧಾನಪಡಿಸುವ ಒಂದು ಒಳ್ಳೆಯ ಸುದ್ದಿ ಹಾಗೂ ಎರಡು ಕೆಟ್ಟ ಸುದ್ದಿಗಳು ಜನಮಾನಸಕ್ಕೆ ಬಂದಿವೆ. ಒಂದೆಡೆ ಹಲವು ದಿನಗಳಿಂದ ಉಪಟಳ ನೀಡುತ್ತಿದ್ದ ಚಿರತೆ ಅರಣ್ಯ ಇಲಾಖೆಯ ಬೋನಿಗೆ ಬಿದ್ದರೆ, ಇನ್ನೊಂದೆಡೆ ಜಮೀನಿಗೆ ಹೊರಟಿದ್ದ ರೈತನ ಮೇಲೆ ಕರಡಿಯೊಂದು ರಕ್ತಸಿಕ್ತ ದಾಳಿ ನಡೆಸಿದೆ. ಇವೆಲ್ಲದರ ಮಧ್ಯೆ ಐತಿಹಾಸಿಕ ಹುಲಿಗೆಮ್ಮ ದೇವಸ್ಥಾನದಲ್ಲಿ ಮಂಗಳಮುಖಿಯರ ಜಗಳಕ್ಕೆ ಮಹಿಳಾ ಪೊಲೀಸರೊಬ್ಬರು ಕೆನ್ನೆಗೆ ಬಾರಿಸಿ ಬುದ್ಧಿ ಕಲಿಸಿದ ಘಟನೆ ನಡೆದಿದೆ.

ಮುಸಲಾಪುರ ಜನರ ಆತಂಕ ಅಂತ್ಯ- ಬೋನಿಗೆ ಬಿದ್ದ ಚಿರತೆ!
ಕನಕಗಿರಿ: ಚಿರತೆಯೊಂದು ಮುಸಲಾಪುರ ಗ್ರಾಮದ ಸುತ್ತಮುತ್ತಲಿನ ಗುಡ್ಡಗಾಡು ಪ್ರದೇಶದಲ್ಲಿ ಕಳೆದ ಹಲವು ದಿನಗಳಿಂದ ಬೀಡು ಬಿಟ್ಟು, ಜಾನುವಾರು ಹಾಗೂ ಜನರ ನಿದ್ದೆಗೆಡಿಸಿತ್ತು. ಈ ಸಮಸ್ಯೆಗೆ ತೆರೆ ಬಿದ್ದಿದ್ದು ಚಿರತೆ ಕೊನೆಗೂ ಅರಣ್ಯ ಇಲಾಖೆಯ ಬೋನಿಗೆ ಬಿದ್ದಿದೆ.ಚಿರತೆ ಓಡಾಟದ ಬಗ್ಗೆ ಸಾರ್ವಜನಿಕರಿಂದ ದೂರು ಕೇಳಿಬಂದ ತಕ್ಷಣ ಕಾರ್ಯಪ್ರವೃತ್ತರಾಗಿದ್ದ ಅರಣ್ಯ ಇಲಾಖೆ ಸಿಬ್ಬಂದಿ, ಚಿರತೆ ಸೆರೆಗೆ ಬೋನು ಇಟ್ಟಿದ್ದರು. ಇಂದು ಮುಂಜಾನೆ ಚಿರತೆಯು ಬೋನಿನೊಳಗೆ ಬಿತ್ತು.ಇದನ್ನು ಕಂಡು ನಿಟ್ಟುಸಿರು ಬಿಟ್ಟ ಸಿಬ್ಬಂದಿ ಚಿರತೆಯನ್ನು ಸುರಕ್ಷಿತವಾಗಿ ದಟ್ಟ ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ. ಇದರಿಂದ ಮುಸಲಾಪುರ ಭಾಗದ ಜನತೆಯ ಆತಂಕ ದೂರಾಗಿದೆ.
ರೈತನ ಮೇಲೆ ಕರಡಿ ಭೀಕರ ದಾಳಿ!
ಕನಕಗಿರಿ: ತಾಲೂಕಿನಲ್ಲಿ ಚಿರತೆ ಆತಂಕ ದೂರಾವಾಯಿತಲ್ಲಾ ಎಂದು ನಿಟ್ಟುಸಿರು ಬಿಡುವಷ್ಟರಲ್ಲೇ ಕರಡಿಯೊಂದು ರೈತನ ಮೇಲೆ ದಾಳಿ ನಡೆಸಿರುವ ಭೀಕರ ಘಟನೆ ಸಂಭವಿಸಿದೆ. ಕನಕಗಿರಿಯ ಮಲ್ಲಯ್ಯ ತಾತ ದೇವಸ್ಥಾನದ ಹಿಂಭಾಗದಲ್ಲಿರುವ ಜಮೀನಿಗೆ ಹೊರಟಿದ್ದ ರಮೇಶ್ ಎಂಬ ರೈತನ ಮೇಲೆ ಕರಡಿಯೊಂದು ಏಕಾಏಕಿ ಮುಖಾಮುಖಿ ದಾಳಿ ನಡೆಸಿದೆ.ಕರಡಿಯ ದಿಢೀರ್ ದಾಳಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ರಮೇಶ್ ಅವರ ಬಲಗಾಲಿಗೆ ತೀವ್ರ ಗಾಯಗಳಾಗಿವೆ. ತಕ್ಷಣವೇ ಅವರನ್ನು ಕನಕಗಿರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ವಲಯ ಅರಣ್ಯಾಧಿಕಾರಿಗಳು (RFO) ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,ಕರಡಿ ಹಾವಳಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಹುಲಿಗಿಮ್ಮ ದೇವಸ್ಥಾನದಲ್ಲಿ ಮಂಗಳಮುಖಿಯರ ಅಸಭ್ಯತೆ -ಮಹಿಳಾ ಪೊಲೀಸ್ನಿಂದ ಧರ್ಮದೇಟು!
ಕೊಪ್ಪಳ: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಐತಿಹಾಸಿಕ ಹುಲಗೆಮ್ಮ ದೇವಸ್ಥಾನದ ಆವರಣದಲ್ಲಿ ಮಂಗಳಮುಖಿಯರ ಅತಿರೇಕದ ವರ್ತನೆ ಮಿತಿಮೀರಿದ್ದು, ಭಕ್ತರು ರೋಸಿಹೋಗಿದ್ದಾರೆ. ದೇವಸ್ಥಾನಕ್ಕೆ ಬರುವ ಭಕ್ತರನ್ನು ಹಣಕ್ಕಾಗಿ ಪೀಡಿಸುತ್ತಿರುವ ಮಂಗಳಮುಖಿಯರು, ಹಣ ಕೊಡದಿದ್ದರೆ ಭಕ್ತರ ಜೊತೆ ಸಾರ್ವಜನಿಕವಾಗಿ ಅತ್ಯಂತ ಅಸಭ್ಯವಾಗಿ ವರ್ತಿಸುತ್ತಿದ್ದಾರೆ.ಇಂದು ಕೂಡ ದೇವಸ್ಥಾನದ ಆವರಣದಲ್ಲಿ ಭಕ್ತರೊಂದಿಗೆ ಮಂಗಳಮುಖಿಯರು ರಂಪಾಟ ಮಾಡುತ್ತಿದ್ದಾಗ ಸ್ಥಳದಲ್ಲಿದ್ದ ಮಹಿಳಾ ಪೊಲೀಸ್ ಪೇದೆಯೊಬ್ಬರು ಮಧ್ಯಪ್ರವೇಶಿಸಿದ್ದಾರೆ. ಪೊಲೀಸರ ಎದುರೇ ಅಸಭ್ಯತೆ ಮುಂದುವರಿಸಿದ ಮಂಗಳಮುಖಿಯೊಬ್ಬಳಿಗೆ ಮಹಿಳಾ ಪೊಲೀಸ್ ಕೆನ್ನೆಗೆ ಬಾರಿಸಿದ್ದಾರೆ.ಈ ದೃಶ್ಯ ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ದೇವಸ್ಥಾನದ ಪಾವಿತ್ರ್ಯತೆ ಕಾಪಾಡಲು ಮಂಗಳಮುಖಿಯರ ಉಪಟಳವನ್ನು ಶಾಶ್ವತವಾಗಿ ನಿಯಂತ್ರಿಸಬೇಕು ಎಂದು ಭಕ್ತರು ದೇವಸ್ಥಾನದ ಆಡಳಿತ ಮಂಡಳಿಗೆ ಮನವಿ ಮಾಡಿದ್ದಾರೆ.
#FreedomTV #KoppalNews #Kanakagiri #LeopardTrapped #BearAttack #HulagemmaTemple #MangalamukhiRow #KoppalPolice #ForestDepartment #BreakingNewsKoppal #FarmersSafety #KannadaNews #TrendingVideo