bengaluruದೇಶ/ವಿದೇಶ

GBA ಚುನಾವಣೆ- 8ನೇ ತಿಂಗಳಿಗೆ ವಿಸ್ತರಿಸಿದ ಸುಪ್ರೀಂಕೋರ್ಟ್!

GBA election postponed by August 31 Supreme court

ಬೆಂಗಳೂರು: ರಾಜಧಾನಿ ನಿವಾಸಿಗಳು ಬಹುದಿನಗಳಿಂದ ಕಾಯುತ್ತಿದ್ದ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (GBA) ಚುನಾವಣೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ಮಹತ್ವದ ಆದೇಶ ಹೊರಡಿಸಿದೆ. ಜಿಬಿಎ ಚುನಾವಣೆಯನ್ನು ಜೂನ್ 30ರೊಳಗೆ ಪೂರ್ಣಗೊಳಿಸಬೇಕೆಂಬ ಈ ಹಿಂದೆ ವಿಧಿಸಿದ್ದ ಗಡುವನ್ನು ಸುಪ್ರೀಂಕೋರ್ಟ್ ಈಗ ಆಗಸ್ಟ್ 31ರವರೆಗೂ ವಿಸ್ತರಣೆ ಮಾಡಿದೆ. ಆದರೆ, “ಮತ್ತೊಮ್ಮೆ ಅವಧಿಯನ್ನು ಯಾವುದೇ ಕಾರಣಕ್ಕೂ ವಿಸ್ತರಿಸುವುದಿಲ್ಲ” ಎಂದು ನ್ಯಾಯಪೀಠವು ರಾಜ್ಯ ಸರ್ಕಾರಕ್ಕೆ ಖಂಡಾತುಂಡವಾಗಿ ತಾಕೀತು ಮಾಡಿದೆ.

ಜಿಬಿಎ ಚುನಾವಣೆಗೆ ವಿಧಿಸಿದ್ದ ಅಂತಿಮ ಅವಧಿಯನ್ನು ವಿಸ್ತರಣೆ ಮಾಡಬೇಕು ಎಂದು ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮಧ್ಯಂತರ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿಪುಲ್‌ ಪಂಚೋಲಿ ಅವರಿದ್ದ ತ್ರಿಸದಸ್ಯ ನ್ಯಾಯಪೀಠವು ಈ ಆದೇಶ ನೀಡಿದೆ.

ಸರ್ಕಾರ ನೀಡಿದ ಸೋಗಲಾಡಿ ಕಾರಣ!


ರಾಜ್ಯ ಸರ್ಕಾರದ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು, “ರಾಜ್ಯದಲ್ಲಿ ಸದ್ಯ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆ ಮತ್ತು ರಾಷ್ಟ್ರೀಯ ಜನಗಣತಿ ಕಾರ್ಯಗಳು ನಡೆಯುತ್ತಿವೆ. ಇದಕ್ಕೆ ಸರ್ಕಾರದ ಸಿಬ್ಬಂದಿಯನ್ನು ನಿಯೋಜಿಸಲಾಗಿರುವುದರಿಂದ ಚುನಾವಣಾ ಪ್ರಕ್ರಿಯೆ ನಡೆಸಲು ತೀವ್ರ ಸಿಬ್ಬಂದಿ ಕೊರತೆ ಎದುರಾಗಿದೆ. ಹಾಗಾಗಿ ಚುನಾವಣೆಗೆ ಕನಿಷ್ಠ 3 ತಿಂಗಳ ಕಾಲಾವಕಾಶ ನೀಡಬೇಕು” ಎಂದು ಕೋರಿದರು. ಈ ವಾದಕ್ಕೆ ರಾಜ್ಯ ಚುನಾವಣಾ ಆಯೋಗದ ಪರ ವಕೀಲರು ಸಹಮತ ವ್ಯಕ್ತಪಡಿಸಿದರು.

ಮೂಲ ಅರ್ಜಿದಾರರ ತೀವ್ರ ಆಕ್ಷೇಪ
ಆದರೆ, ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಮೂಲ ಅರ್ಜಿದಾರರ ಪರ ವಕೀಲರು, “ಕಳೆದ ಹಲವು ವರ್ಷಗಳಿಂದ ಯಾವುದಾದರೊಂದು ನೆಪ ಒಡ್ಡಿ ಬಿಬಿಎಂಪಿ ಚುನಾವಣೆಯನ್ನು ಮುಂದೂಡುತ್ತಾ ಬರಲಾಗುತ್ತಿದೆ. ಕಳೆದ ವಿಚಾರಣೆಯಲ್ಲೇ ಜೂನ್ ಅಂತ್ಯದೊಳಗೆ ಪ್ರಕ್ರಿಯೆ ಮುಗಿಸಲು ಗಡುವು ನೀಡಲಾಗಿತ್ತು.ಈಗ ಮತ್ತೆ ಕಾಲಾವಕಾಶ ಕೇಳುತ್ತಿರುವುದು ಸರಿಯಲ್ಲ” ಎಂದು ವಾದಿಸಿದರು.ಎರಡೂ ಕಡೆಯ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠವು, ಸರ್ಕಾರದ ಮನವಿಯನ್ನು ಭಾಗಶಃ ಪುರಸ್ಕರಿಸಿ ಆಗಸ್ಟ್ 31ರೊಳಗೆ ಇಡೀ ಚುನಾವಣಾ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಅಂತಿಮ ಗಡುವು ವಿಧಿಸಿದೆ.

2020 ರಿಂದ ನನೆಗುದಿಗೆ ಬಿದ್ದಿರುವ ಚುನಾವಣೆ
ಡಿಸೆಂಬರ್ 4, 2020ರಂದು ಮತದಾರರ ಅಂತಿಮ ಪಟ್ಟಿ ಪ್ರಕಟಿಸಿದ 6 ವಾರಗಳೊಳಗೆ ಬಿಬಿಎಂಪಿ ಚುನಾವಣೆ ನಡೆಸುವಂತೆ ಹೈಕೋರ್ಟ್ ರಾಜ್ಯ ಚುನಾವಣಾ ಆಯೋಗಕ್ಕೆ ಆದೇಶಿಸಿತ್ತು.ನಂತರದ ಬೆಳವಣಿಗೆಯಲ್ಲಿ ಡಿಸೆಂಬರ್ 18, 2020 ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿ,ವಾರ್ಡ್‌ಗಳ ಮರು ವಿಂಗಡಣೆ (ಡಿಲಿಮಿಟೇಶನ್) ಪ್ರಕ್ರಿಯೆ ಮುಗಿಸಲು ಸರ್ಕಾರಕ್ಕೆ ಸೂಚಿಸಿತು.ಆನಂತರ 2020ರ ತಿದ್ದುಪಡಿ ಕಾಯ್ದೆಯ ಮೂಲಕ ಬೆಂಗಳೂರಿನ ವಾರ್ಡ್‌ಗಳ ಸಂಖ್ಯೆಯನ್ನು 198 ರಿಂದ 243ಕ್ಕೆ (ಪ್ರಸ್ತುತ ಜಿಬಿಎ ಅಡಿಯಲ್ಲಿ 369 ವಾರ್ಡ್‌ಗಳು) ಹೆಚ್ಚಿಸಲಾಗಿತ್ತು. ಹೈಕೋರ್ಟ್ ಹಳೇ 198 ವಾರ್ಡ್‌ಗಳ ಆಧಾರದಲ್ಲೇ ಚುನಾವಣೆ ನಡೆಸಲು ಹೇಳಿತ್ತಾದರೂ, ಸರ್ಕಾರ ಇದನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿತ್ತು.ಕಳೆದ 2020ರ ಸೆಪ್ಟೆಂಬರ್‌ನಿಂದ ಬೆಂಗಳೂರು ಮಹಾನಗರ ಪಾಲಿಕೆಯು ಚುನಾಯಿತ ಜನಪ್ರತಿನಿಧಿಗಳಿಲ್ಲದೆ ಅಧಿಕಾರಿಗಳ ಆಡಳಿತದಲ್ಲೇ ಮುನ್ನಡೆಯುತ್ತಿದೆ. ಸುಪ್ರೀಂಕೋರ್ಟ್‌ನ ಇಂದಿನ ಕಠಿಣ ಆದೇಶದ ಬಳಿಕ, ಇನ್ನು ಕೇವಲ ಎರಡು ತಿಂಗಳಲ್ಲಿ ಇಡೀ ಚುನಾವಣಾ ಕಣ ಸಜ್ಜಾಗಬೇಕಿರುವುದು ಅನಿವಾರ್ಯವಾಗಿದೆ.ಈ ಎಲ್ಲಾ ಬೆಳವಣಿಗೆಗಳ ನಂತರವೂ ಬೆಂಗಳೂರಿಗರಿಗೆ ಚುನಾವಣೆ ನಡೆಯುವ ಬಗ್ಗೆ ಅನುಮಾನ ಇದ್ದೇ ಇದೆ.

#GBAPolls #BBMPElection #SupremeCourt #BengaluruCivicPolls #KarnatakaGovernment #GreaterBengaluruAuthority #BreakingNews #BengaluruNews #CivicElections2026 #FreedomTV

Comments (0)

Your email address will not be published. Required fields are marked *

Back to top button