
ಬಳ್ಳಾರಿ: “ಕಳೆದ ಮೂರು ವರ್ಷಗಳ ಅವಧಿಯಲ್ಲಿ ನೂರು ಸುಳ್ಳುಗಳನ್ನು ಹೇಳಿರುವುದೇ ರಾಜ್ಯ ಕಾಂಗ್ರೆಸ್ ಸರ್ಕಾರದ ಸಾಧನೆಯಾಗಿದೆ .ಮುಖ್ಯಮಂತ್ರಿ ಸಿದ್ದರಾಮಯ್ಯ ಸುಳ್ಳಿಗೆ ಮಾಲೀಕರಾದರೆ, ಡಿಸಿಎಂ ಡಿ.ಕೆ. ಶಿವಕುಮಾರ್ ಆ ಸುಳ್ಳಿಗೆ ಸಾಕ್ಷಿದಾರರು! ಇಂತಹ ಮಾನಗೆಟ್ಟ ಸರ್ಕಾರ ಯಾವ ಪುರುಷಾರ್ಥಕ್ಕೆ ಸಾಧನಾ ಸಮಾವೇಶ ಮಾಡುತ್ತಿದೆ?” ಎಂದು ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಬಿ. ಶ್ರೀರಾಮುಲು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯ, ರೈತರ ಆತ್ಮಹತ್ಯೆ, ಬೆಲೆ ಏರಿಕೆ ಹಾಗೂ ತುಷ್ಟೀಕರಣ ರಾಜಕಾರಣದ ವಿರುದ್ಧ ಅಂಕಿ-ಅಂಶಗಳ ಸಮೇತ ವಾಗ್ದಾಳಿ ನಡೆಸಿದರು.

ರೈತರಿಗೆ ಆತ್ಮಹತ್ಯ ಭಾಗ್ಯ ನೀಡಿದ ಸಿದ್ದು ಸರ್ಕಾರ!
“ರಾಜ್ಯ ಸರ್ಕಾರ ಗ್ಯಾರಂಟಿಗಳ ಹೆಸರಿನಲ್ಲಿ ಜನರನ್ನು ಮರಳು ಮಾಡುತ್ತಿದೆ. ಆದರೆ ವಾಸ್ತವದಲ್ಲಿ ಹಾಲು ಉತ್ಪಾದಕರಿಗೆ ಸಬ್ಸಿಡಿ ಹಣ ನೀಡಿಲ್ಲ,ಬಿತ್ತನೆ ಬೀಜಗಳ ದರ ಗಗನಕ್ಕೇರಿದೆ. ಈ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರೈತರಿಗೆ ‘ಆತ್ಮಹತ್ಯೆ ಭಾಗ್ಯ’ದೊರೆತಿದೆ ಎಂದು ಶ್ರೀರಾಮುಲು ಆಕ್ರೋಶ ಹೊರಹಾಕಿದರು. ಕೇಂದ್ರ ಸರ್ಕಾರ ನೀಡುವ ರಸಗೊಬ್ಬರವನ್ನು ರಾಜ್ಯದಲ್ಲಿ ವೀರಾವೇಶದಿಂದ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ.ಕೇಂದ್ರ ಸರ್ಕಾರದ ಮಹತ್ವ ಯೋಜನೆ ಕಿಸಾನ್ ಸನ್ಮಾನ್ ಯೋಜನೆಯನ್ನು ರಾಜ್ಯ ಸರ್ಕಾರ ನಿಲ್ಲಿಸಿದೆ ಎಂದು ಶ್ರೀರಾಮುಲು ದೂರಿದರು.
ಪಂಪ್‌ಸೆಟ್ ರಿಪೇರಿ, ಬಸ್‌ಗಳ ಪಂಚರ್ ಗೂ ದುಡ್ಡಿಲ್ಲ!
ರಾಜ್ಯದ ಆರ್ಥಿಕ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ ಎಂದ ಶ್ರೀರಾಮುಲು ಹರಿಹಾಯ್ದರು. “ನೀರು, ವಿದ್ಯುತ್, ಜಮೀನು ನೋಂದಣಿ ದರ ಸೇರಿದಂತೆ ಪ್ರತಿಯೊಂದರ ಬೆಲೆಯನ್ನೂ ಏರಿಕೆ ಮಾಡಲಾಗಿದೆ. ಸಾರಿಗೆ ನೌಕರರ ಮುಷ್ಕರಕ್ಕೆ ಮುಂದಾಗಿದ್ದಾರೆ.ಅವರಿಗೆ ವೇತನ ಹೆಚ್ಚಳ ಮಾಡುತ್ತಿಲ್ಲ ರಸ್ತೆಯಲ್ಲಿ ಓಡಾಡುತ್ತಿರುವ ಸರ್ಕಾರಿ ಬಸ್‌ಗಳೆಲ್ಲವೂ ಡಕೋಟಾ ಎಕ್ಸ್ ಪ್ರೆಸ್ ಗಳಾಗಿದ್ದು, ಬಸ್ ಗಳ ಬಾಗಿಲುಗಳು ಕಿತ್ತುಹೋಗುವಂತಿವೆ, ಪಂಚರ್ ಆದ್ರೆ ರಿಪೇರಿ ಮಾಡಿಸಲೂ ಈ ಭ್ರಷ್ಟ ಸರ್ಕಾರದ ಬಳಿ ದುಡ್ಡಿಲ್ಲ ಎಂದು ದೂರಿದರು. ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸರ್ಕಾರಿ ನೌಕರರಿಗೆ ಸಕಾಲಕ್ಕೆ ಸಂಬಳ ನೀಡುವುದಕ್ಕೆ ಆಗದ ಸಿದ್ದು ಸರ್ಕಾರ ಒಂದು ಅಸಮರ್ಥ ಸರ್ಕಾರ ಎಂದರು.
ವಾಲ್ಮೀಕಿ ಹಗರಣದ ಯಶಸ್ಸಿಗೆ ಸಂಕಲ್ಪ ಸಮಾವೇಶ!
“ಸಿದ್ದರಾಮಯ್ಯ ಮತ್ತು ಡಿಕೆಶಿ ಜಗಳದಲ್ಲಿ ಸಿದ್ದರಾಮಯ್ಯ ಅವರ ‘ಡಬ್ಬ’ ಜೋರಾಗಿ ಸೌಂಡ್ ಮಾಡುತ್ತಿದೆ. ಇಷ್ಟಕ್ಕೂ ನೀವು ಸಮಾವೇಶ ಮಾಡುತ್ತಿರುವುದು ವಾಲ್ಮೀಕಿ ಹಗರಣದಲ್ಲಿ ಹಣ ಲೂಟಿ ಹೊಡೆದಿದ್ದಕ್ಕೇ? ಅಥವಾ ರೈತರು ಸಾಲಬಾಧೆಯಿಂದ ಸಾಯುತ್ತಿರುವುದಕ್ಕೇ?” ಎಂದು ಪ್ರಶ್ನಿಸಿದ ಶ್ರೀರಾಮುಲು, “ಕುಕ್ಕರ್ ಬಾಂಬ್ ಇಟ್ಟವರನ್ನು ‘ಬ್ರದರ್’ ಎನ್ನುವ ಇವರು, ನಾಸಿರ್ ಹುಸೇನ್ ಬೆಂಬಲಿಗರು ಪಾಕಿಸ್ತಾನ್ ಜಿಂದಾಬಾದ್ ಅಂದರೂ ಅವರ ಪರ ನಿಲ್ಲುತ್ತಾರೆ” ಎಂದು ಕಿಡಿಕಾರಿದರು.
ಮುಸ್ಲಿಂ ಕಾಲೋನಿಗಳ ಅಭಿವೃದ್ಧಿಗೆ ₹10,000 ಕೋಟಿ ಮೀಸಲಿಟ್ಟು ಹಿಜಾಬ್ ನಿಷೇಧ ವಾಪಸ್ ಪಡೆಯುವ ಮೂಲಕ ಸಿದ್ದರಾಮಯ್ಯ ಅವರು ಸಮಾಜದಲ್ಲಿ ಜಾತಿ ಒಡೆಯುತ್ತಿದ್ದಾರೆ. ಹಿಂದೂಗಳ ಹಬ್ಬಗಳ ಮೇಲೆ ದಾಳಿಯಾಗುತ್ತಿದ್ದರೂ ಹಿಂದೂಗಳ ಮೇಲೆಯೇ ಕೇಸ್ ದಾಖಲಿಸಲಾಗುತ್ತಿದೆ ಇದು ಯಾವ ರೀತಿಯ ಜಾತ್ಯಾತೀತತೆ ಎಂದು ಆರೋಪ ಮಾಡಿದರು.
ಇಂಧನ ದರ ಏರಿಕೆ ಮೋದಿ ಹೇಳಿಕೆಗೆ ಸಮರ್ಥನೆ
ದೇಶದಲ್ಲಿ ಪೆಟ್ರೋಲ್, ಡೀಸೆಲ್ ಮಿತವಾಗಿ ಬಳಸಿ ಮತ್ತು ಸದ್ಯಕ್ಕೆ ಚಿನ್ನ ಖರೀದಿ ಮಾಡಬೇಡಿ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡ ಶ್ರೀರಾಮುಲು, “ಜಾಗತಿಕ ಮಟ್ಟದಲ್ಲಿ ಯುದ್ಧದ ಸನ್ನಿವೇಶ ಇರುವುದರಿಂದ ಪ್ರಧಾನಿಗಳು ಮಿತಬಳಕೆಗೆ ಕರೆ ನೀಡಿದ್ದಾರೆ.ಯುದ್ಧದ ಪರಿಸ್ಥಿತಿ ನಿಯಂತ್ರಣಕ್ಕೆ ಬಂದರೆ ಎಲ್ಲವೂ ಸರಿಹೋಗುತ್ತದೆ.ಆದರೆ ದೇಶದ ಆರ್ಥಿಕತೆ ದಿವಾಳಿಯಾಗಿದೆ ಎಂದು ಕಾಂಗ್ರೆಸ್ ಬೊಬ್ಬೆ ಹೊಡೆಯುತ್ತಿದೆ. ಭಾರತ ಇಂದು ಜಗತ್ತಿನಲ್ಲೇ 3ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತಿದೆ. ಕೇಂದ್ರದ ಸಚಿವರು ತಾವೇ ಖರ್ಚು ಕಡಿಮೆ ಮಾಡುತ್ತಿದ್ದಾರೆ. ಆದರೆ ಸಿಎಂ ಸಿದ್ದರಾಮಯ್ಯ 6 ರಿಂದ 8 ಬೆಂಗಾವಲು ವಾಹನಗಳಲ್ಲಿ ಐಷಾರಾಮಿಯಾಗಿ ತಿರುಗಾಡುತ್ತಿದ್ದಾರೆ, ಮೊದಲು ಅವರು ಸುಧಾರಿಸಿಕೊಳ್ಳಲಿ” ಎಂದು ತಿರುಗೇಟು ನೀಡಿದರು.
#Sriramulu #Siddaramaiah #CongressGovernment #Ballari #BJPKhara #KarnatakaPolitics #FuelPrice #FarmersIssue #SCReservation #BreakingNews #FreedomTV #KannadaNews




