VIjayanagara

ವಿವಿ ಕುಲಪತಿ ಕಿರುಕುಳ- ಪ್ರೊಫೆಸರ್ ಮೋಹನ್ ದಾಸ್ ನಾಪತ್ತೆ!

VC harassment in krishnadevaraya university professor missing

ಬಳ್ಳಾರಿ: ಬಳ್ಳಾರಿಯ ವಿಜಯನಗರದ ಶ್ರೀಕೃಷ್ಣದೇವರಾಯ ಸುದ್ದಿಗೆ ಗ್ರಾಸವಾಗಿದೆ. ಈ ವಿಶ್ವವಿದ್ಯಾಲಯದ ಕುಲಪತಿಗಳ ನಿರಂತರವಾದ ಮಾನಸಿಕ ಕಿರುಕುಳಕ್ಕೆ ಬೇಸತ್ತು ಸಹಾಯಕ ಪ್ರಾಧ್ಯಾಪಕರೊಬ್ಬರು ರಹಸ್ಯವಾಗಿ ನಾಪತ್ತೆಯಾಗಿರುವ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ. ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದ ಪ್ರೊ. ಮೋಹನ್ ದಾಸ್ (37) ನಾಪತ್ತೆಯಾದ ದುರ್ದೈವಿಯಾಗಿದ್ದು ಕುಟುಂಬಸ್ಥರು ಪ್ರಾಧ್ಯಾಪಕರ ನಾಪತ್ತೆಗೆ ಕುಲಪತಿ ಹಾಗೂ ಸಿಬ್ಬಂದಿ ನೇರ ಹೊಣೆ ಎಂದು ಆರೋಪಿಸಿದ್ದಾರೆ.

26 ಪುಟಗಳ ಡೆತ್‌ನೋಟ್ ; ಪತ್ನಿ ಕಣ್ಣೀರು!

ಪತಿಯ ನಾಪತ್ತೆಯ ಹಿಂದೆ ಕುಲಪತಿ ಮುನಿರಾಜು, ಸಹಾಯಕ ಪ್ರಾಧ್ಯಾಪಕ ವೀರ ಪ್ರಸಾದ್, ಚಾಲಕ ಸುನೀಲ್ ಸೇರಿದಂತೆ ಒಟ್ಟು ಐದು ಜನರ ವಿರುದ್ಧ ಪ್ರೊಫೆಸರ್ ಪತ್ನಿ ಜಮೀಮಾ ಗಂಭೀರ ಆರೋಪ ಮಾಡಿದ್ದಾರೆ. ಸದ್ಯ ಬಳ್ಳಾರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ. ಕಚೇರಿಯಲ್ಲೇ ಮೊಬೈಲ್,ಬೈಕ್ ಹಾಗೂ 26 ಪುಟಗಳ ಡೆತ್ ನೋಟಿನ ಡೈರಿ ಲಭ್ಯವಾಗಿದೆ.


ಬಳ್ಳಾರಿಯ ಕುವೆಂಪು ನಗರದ 3ನೇ ವಾರ್ಡ್ ನಿವಾಸಿಯಾದ ಪ್ರೊ. ಮೋಹನ್ ದಾಸ್ ಅವರು ಮೇ 13ರಂದು ಮನೆಯಿಂದ ವಿಶ್ವವಿದ್ಯಾಲಯಕ್ಕೆ ತೆರಳಿದ್ದರು. ಆದರೆ, ಅಂದಿನಿಂದ ಅವರು ಮನೆಗೆ ಮರಳದೆ ನಾಪತ್ತೆಯಾಗಿದ್ದಾರೆ. ಪತ್ನಿ ಜಮೀಮಾ ರವರು ಮೇ 16ರಂದು ವಿಶ್ವವಿದ್ಯಾಲಯಕ್ಕೆ ತೆರಳಿ ಪರಿಶೀಲಿಸಿದಾಗ, ಪ್ರೊಫೆಸರ್ ಕಚೇರಿಯಲ್ಲೇ ಅವರ ಖಾಸಗಿ ಮೊಬೈಲ್, ಬೈಕ್ ಮತ್ತು ಡೆತ್ ನೋಟ್ ಪತ್ತೆಯಾಗಿದೆ. ಡೈರಿಯಲ್ಲಿ ಪ್ರೊ. ಮೋಹನ್ ದಾಸ್ ಅವರು ತಮಗೆ ವಿಶ್ವವಿದ್ಯಾಲಯದಲ್ಲಿ ನೀಡಲಾಗುತ್ತಿದ್ದ ಮಾನಸಿಕ ಕಿರುಕುಳದ ಬಗ್ಗೆ ಬರೋಬ್ಬರಿ 26 ಪುಟಗಳಲ್ಲಿ ಸವಿಸ್ತಾರವಾಗಿ ಬರೆದಿಟ್ಟಿದ್ದಾರೆ. ಕಿರುಕುಳ ನೀಡಿದವರ ಹೆಸರುಗಳು ಹಾಗೂ ಅದಕ್ಕೆ ಕಾರಣಗಳನ್ನು ಡೈರಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಪತ್ನಿ ಆರೋಪಿಸಿದ್ದಾರೆ.

ಒಂದೂವರೆ ವರ್ಷದಿಂದ ಸಂಬಳವಿಲ್ಲ, ವಸತಿ ಗೃಹ ಖಾಲಿಗೆ ನೋಟಿಸು!
ಡೈರಿಯಲ್ಲಿ ಉಲ್ಲೇಖಿಸಿರುವ ಪ್ರಕಾರ, 2025ರ ಮಾರ್ಚ್‌ನಿಂದ ಅಂದರೆ ಕಳೆದ ಒಂದೂವರೆ ವರ್ಷದಿಂದ ಪ್ರೊ. ಮೋಹನ್ ದಾಸ್ ಅವರಿಗೆ ಸಂಬಳ ನೀಡದೆ ವಿಸಿ ಮುನಿರಾಜು ಸತಾಯಿಸುತ್ತಿದ್ದರು. ಇದರ ನಡುವೆ ಅವರು ವಾಸವಿದ್ದ ವಿಶ್ವವಿದ್ಯಾಲಯದ ವಸತಿ ಗೃಹವನ್ನು (ಕ್ವಾರ್ಟರ್ಸ್) ತಕ್ಷಣ ಖಾಲಿ ಮಾಡುವಂತೆ ನೋಟಿಸ್ ನೀಡಿದ್ದರು ಎನ್ನಲಾಗಿದೆ. ಈ ಅತಿಯಾದ ಮಾನಸಿಕ ಒತ್ತಡ ಅವರನ್ನು ಜರ್ಜರಿತರನ್ನಾಗಿಸಿತ್ತು ಎನ್ನಲಾಗಿದೆ.ಈ ಹಿಂದೆ ಪ್ರೊಫೆಸರ್ ಮೋಹನ್ ದಾಸ್ ವಿರುದ್ಧ ಕಲಬುರ್ಗಿ ಜಿಲ್ಲೆಯ ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿತ್ತು.ಆದರೆ, ತನಿಖೆಯ ಬಳಿಕ ಪೊಲೀಸರು ನ್ಯಾಯಾಲಯಕ್ಕೆ ‘ಬಿ ರಿಪೋರ್ಟ್’ (ಆರೋಪ ಮುಕ್ತ) ಸಲ್ಲಿಸಿದ್ದರು. ಆದಾಗ್ಯೂ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯವರು ಹಗೆತನ ಸಾಧಿಸಿ ಕಿರುಕುಳ ನೀಡುತ್ತಿದ್ದರು ಎಂದು ಪ್ರಾದ್ಯಾಪಕರ ಪತ್ನಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.


ಪತ್ನಿ ಜಮೀಮಾ ಕಣ್ಣೀರಿನ ಮನವಿ
ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರೊಫೆಸರ್ ಪತ್ನಿ ಜಮೀಮಾ, “ಒಂದೂವರೆ ವರ್ಷದಿಂದ ಸಂಬಳ ನೀಡದೇ, ಮನೆ ಖಾಲಿ ಮಾಡುವಂತೆ ತೀವ್ರ ಮಾನಸಿಕ ಒತ್ತಡ ಹಾಕಿದ್ದರಿಂದಲೇ ನನ್ನ ಗಂಡ ಬೇಸತ್ತು ನಾಪತ್ತೆಯಾಗಿದ್ದಾರೆ. ಪೊಲೀಸರು ಕೇವಲ ನಾಪತ್ತೆ ಪ್ರಕರಣ ಎಂದು ದೂರು ದಾಖಲಿಸಿಕೊಂಡಿದ್ದಾರೆ. ನನ್ನ ಪತಿಯನ್ನು ಶೀಘ್ರವಾಗಿ ಪತ್ತೆಹಚ್ಚಿ, ಅವರಿಗೆ ಈ ಸ್ಥಿತಿ ಬರಲು ಕಾರಣರಾದ ಕುಲಪತಿ ಮುನಿರಾಜು ಸೇರಿದಂತೆ ಐವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಕಣ್ಣೀರು ಹಾಕುತ್ತಾ ಒತ್ತಾಯಿಸಿದ್ದಾರೆ. ಉನ್ನತ ಶಿಕ್ಷಣ ಸಂಸ್ಥೆಯೊಂದರ ಕುಲಪತಿಗಳ ವಿರುದ್ಧವೇ ಸಹಾಯಕ ಪ್ರಾಧ್ಯಾಪಕರೊಬ್ಬರ ನಾಪತ್ತೆ ಹಾಗೂ ಕಿರುಕುಳದ ಆರೋಪ ಕೇಳಿಬಂದಿರುವುದು ಈಗ ಶೈಕ್ಷಣಿಕ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.

#Ballari #VSKUniversity #ProfessorMissing #VCMuniraju #BallariPolice #EducationSector #CrimeNews #MissingCase #MentalHarassment #FreedomTV #KannadaNews

Comments (0)

Your email address will not be published. Required fields are marked *

Back to top button