ದೇಶ/ವಿದೇಶ

ಅಗತ್ಯ ಬಿದ್ದರೆ ಬೀದಿನಾಯಿಗಳನ್ನು ಕೊಲ್ಲಿ-ಸುಪ್ರೀಂ ಕೋರ್ಟ್!

SC -emergency Kill Stray dogs passes the order

ನವದೆಹಲಿ: ದೇಶಾದ್ಯಂತ ಭೀತಿ ಸೃಷ್ಟಿಸಿರುವ ಬೀದಿ ನಾಯಿಗಳ ಹಾವಳಿ ಹಾಗೂ ನಾಯಿ ಕಡಿತದ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ಹಾಗೂ ಐತಿಹಾಸಿಕ ತೀರ್ಪು ನೀಡಿದೆ. “ನಾಯಿಗಳಿಂದ ಯಾವುದೇ ಬೆದರಿಕೆಯಿಲ್ಲದೆ ಮುಕ್ತವಾಗಿ ನಿಶ್ಚಿಂತೆಯಿಂದ ಬದುಕುವ ಹಕ್ಕು ಸಂವಿಧಾನದಲ್ಲಿರುವ ಘನತೆಯಿಂದ ಜೀವಿಸುವ ಹಕ್ಕಿನಲ್ಲೇ ಅಡಗಿದೆ” ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ತೀವ್ರ ಆಕ್ರಮಣಕಾರಿ ಹಾಗೂ ರೋಗಗ್ರಸ್ತ ಬೀದಿ ನಾಯಿಗಳಿಗೆ ಕಾನೂನುಬದ್ಧ ದಯಾಮರಣ ನೀಡಲು ಸ್ಥಳೀಯ ಅಧಿಕಾರಿಗಳಿಗೆ ಮುಕ್ತ ಅವಕಾಶ ಒದಗಿಸಿದೆ. ಬೀದಿ ನಾಯಿಗಳ ಸ್ಥಳಾಂತರ ಮತ್ತು ಸಂತಾನಶಕ್ತಿ ಹರಣ ಚಿಕಿತ್ಸೆಗೆ ಸಂಬಂಧಿಸಿದ ಹಿಂದಿನ ಕಠಿಣ ನಿರ್ದೇಶನಗಳನ್ನು ಹಿಂಪಡೆಯಲು ಕೋರಿ ಸಲ್ಲಿಸಲಾಗಿದ್ದ ಎಲ್ಲಾ ಅರ್ಜಿಗಳನ್ನು ನ್ಯಾಯಾಲಯವು ವಜಾಗೊಳಿಸಿದೆ.

ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಆದೇಶವೇನು?


ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ಎನ್‌ವಿ ಅಂಜಾರಿಯಾ ಅವರಿದ್ದ ತ್ರಿಸದಸ್ಯ ಪೀಠವು “ಸ್ಥಳೀಯ ಅಧಿಕಾರಿಗಳು ಪ್ರಾಣಿಗಳ ಜನನ ನಿಯಂತ್ರಣ ನಿಯಮಗಳನುಸಾರವಾಗಿ, ಮಾನವ ಜೀವ ಮತ್ತು ಸುರಕ್ಷತೆಗೆ ಒದಗುವ ಬೆದರಿಕೆಗೆ ತಡೆಯೊಡ್ಡಬೇಕು. ಗುಣಪಡಿಸಲಾಗದಷ್ಟು ಅನಾರೋಗ್ಯ ಪೀಡಿತ, ಕ್ರೋಧಯುಕ್ತ ಅಥವಾ ಅತ್ಯಂತ ಅಪಾಯಕಾರಿ ನಾಯಿಗಳಿಗೆ ದಯಾಮರಣ ಕಲ್ಪಿಸಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬಹುದು” ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ (AWBI) ಹೊರಡಿಸಿದ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನಗಳ (SOP) ಸಿಂಧುತ್ವವನ್ನು ಪ್ರಶ್ನಿಸುವ ಅರ್ಜಿಗಳನ್ನು ವಜಾಗೊಳಿಸಿದ ಈ ನ್ಯಾಯಪೀಠ, ಬೀದಿ ನಾಯಿಗಳ ಹಾವಳಿ ತಡೆಗೆ ಮೂಲಸೌಕರ್ಯಗಳನ್ನು ಹೆಚ್ಚಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕಟ್ಟುನಿಟ್ಟಿನ ನಿರ್ದೇಶನಗಳನ್ನು ನೀಡಿದೆ.

ಕಠಿಣ ವಾಸ್ತವ ನಿರ್ಲಕ್ಷ್ಯ ಸಲ್ಲದು!
ಬಹುತೇಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಹೆಚ್ಚುತ್ತಿರುವ ಬೀದಿ ನಾಯಿಗಳ ಸಂಖ್ಯೆ ನಿಯಂತ್ರಣಕ್ಕೆ ಯಾವುದೇ ದೀರ್ಘಕಾಲೀನ ಅಥವಾ ಸ್ಥಿರ ಕ್ರಮಗಳನ್ನ ಕೈಗೊಂಡಿಲ್ಲ. ಪ್ರಾಣಿಗಳ ಜನನ ನಿಯಂತ್ರಣ (ABC) ಕಾರ್ಯಕ್ರಮಗಳು ಕೇವಲ ಕಾಗದಕ್ಕೆ ಮಾತ್ರ ಸೀಮಿತವಾಗಿವ ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ. “ನಾಯಿ ಕಡಿತದಿಂದ ಉಂಟಾಗುವ ಭೀತಿಯನ್ನು ಮೀರಿ ಬದುಕುವ ಹಕ್ಕು ಪ್ರತಿಯೊಬ್ಬ ನಾಗರಿಕನದ್ದು.ಮುಗ್ಧ ಮಕ್ಕಳು,ವೃದ್ಧರು ಹಾಗೂ ಅಂತರರಾಷ್ಟ್ರೀಯ ಪ್ರಯಾಣಿಕರು ಬೀದಿ ನಾಯಿಗಳ ದಾಳಿಗೆ ಬಲಿಯಾಗುತ್ತಿರುವ ವಾಸ್ತವಗಳನ್ನು ಕಂಡೂ ನ್ಯಾಯಾಲಯವು ಕಣ್ಣು ಮುಚ್ಚಿ ಕೂರಲು ಸಾಧ್ಯವಿಲ್ಲ” ಎಂದು ನ್ಯಾಯಪೀಠ ಗಂಭೀರವಾಗಿ ಹೇಳಿದೆ.

ಹಿಡಿದ ಸ್ಥಳದಲ್ಲೇ ಮರಳಿ ನಾಯಿಗಳನ್ನು ಬಿಡುವಂತಿಲ್ಲ!
ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು ಮತ್ತು ರೈಲ್ವೆ ನಿಲ್ದಾಣಗಳಂತಹ ಸಾರ್ವಜನಿಕ ಮತ್ತು ಜನನಿಬಿಡ ಪ್ರದೇಶಗಳಲ್ಲಿ ನಾಯಿ ಕಡಿತದ ಘಟನೆಗಳು ಹೆಚ್ಚಾಗುತ್ತಿರುವುದು ‘ಆತಂಕಕಾರಿ’ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ತನ್ನ ಹಿಂದಿನ ಆದೇಶದಂತೆ,ಬೀದಿ ನಾಯಿಗಳಿಗೆ ಸಂತಾನಶಕ್ತಿ ಹರಣ ಚಿಕಿತ್ಸೆ ಲಸಿಕೆ ಹಾಕಿದ ನಂತರ ಅವುಗಳನ್ನು ನಿಶ್ಚಿತ ಆಶ್ರಯ ತಾಣಗಳಿಗೆ ಸ್ಥಳಾಂತರಿಸಬೇಕು. ಯಾವುದೇ ಕಾರಣಕ್ಕೂ ನಾಯಿಗಳನ್ನು ಹಿಡಿದ ಮೂಲ ಸ್ಥಳಕ್ಕೆ ಹೋಗಿ ಬಿಡಬಾರದು ಎಂದು ಆದೇಶಿಸಿದೆ.

ಸುಪ್ರೀಂ ಸ್ವಯಂ ಪ್ರೇರಿತ ಕೇಸ್-ರಾಹುಲ್ ಗಾಂಧಿ ಆಕ್ಷೇಪ!
ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ದೇಶಾದ್ಯಂತ ಬೀದಿ ನಾಯಿಗಳ ಕಡಿತದಿಂದ ಮಕ್ಕಳಲ್ಲಿ ರೇಬೀಸ್ ರೋಗ ಹೆಚ್ಚಾಗುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ಬಂದ ವರದಿಗಳನ್ನು ಆಧರಿಸಿ ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತವಾಗಿ (Suo Motu) ಈ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿತ್ತು. ಆದರೆ, ಬೀದಿ ನಾಯಿಗಳ ಕುರಿತಾದ ಸುಪ್ರೀಂ ಕೋರ್ಟ್‌ನ ಈ ಕಠಿಣ ನಿರ್ದೇಶನಗಳು “ಮಾನವೀಯ ಮತ್ತು ವೈಜ್ಞಾನಿಕ ನೀತಿಗೆ ವಿರುದ್ಧವಾದದ್ದು” ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದಾಗ್ಯೂ,ಮಾನವ ಜೀವ ಮತ್ತು ಸುರಕ್ಷತೆಯೇ ಮೊದಲ ಆದ್ಯತೆ ಎಂದು ಸಾರಿರುವ ಸುಪ್ರೀಂ ಕೋರ್ಟ್‌ನ ಈ ಮಹತ್ವದ ತೀರ್ಪು ಸಾರ್ವಜನಿಕ ವಲಯದಲ್ಲಿ, ವಿಶೇಷವಾಗಿ ನಾಯಿ ಹಾವಳಿಯಿಂದ ಬೇಸತ್ತಿದ್ದ ಜನಸಾಮಾನ್ಯರಲ್ಲಿ ಭಾರಿ ನಿರಾಳವನ್ನು ಉಂಟು ಮಾಡಿದೆ.

#SupremeCourt #StrayDogs #HistoricVerdict #DogBiteCases #Euthanasia #HumanSafety #AnimalBirthControl #RightToLive #LawNews #NationalNews #FreedomTV #KannadaNews

Comments (0)

Your email address will not be published. Required fields are marked *

Back to top button