NEET ಪ್ರಶ್ನೆಪತ್ರಿಕೆ ಹಗರಣ: ರಾಜ್ಯಾದ್ಯಂತ ಭುಗಿಲೆದ್ದ ಆಕ್ರೋಶ!
Neet Scandal protest in Vijayanagara and Vijayapura districts

ವಿಜಯನಗರ/ವಿಜಯಪುರ: ವೈದ್ಯಕೀಯ ಶಿಕ್ಷಣದ ಪ್ರವೇಶಾತಿಗಾಗಿ ನಡೆಯುವ ನೀಟ್ (NEET) ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದು ಈಗ ದೇಶಾದ್ಯಂತ ಕಿಚ್ಚು ಹಚ್ಚಿದೆ. ವಿದ್ಯಾರ್ಥಿಗಳ ಭವಿಷ್ಯದ ಜೊತೆ ಕೇಂದ್ರ ಸರ್ಕಾರ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿ ರಾಜ್ಯದ ವಿವಿಧೆಡೆ ಯುವ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಪ್ರತಿಭಟನೆಗಳು ನಡೆದವು.

ಹೊಸಪೇಟೆ ಪಟ್ಟಣದ ಡಾ. ಪುನೀತ್ ರಾಜ್‍ಕುಮಾರ್ ವೃತ್ತದಲ್ಲಿ ಜಮಾಯಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪರೀಕ್ಷೆಗೂ ಮೊದಲೇ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿ, ಅದಕ್ಕೆ ತಕ್ಕ ಉತ್ತರಗಳನ್ನು ಸಿದ್ಧಪಡಿಸಿ ಹಂಚಿಕೆ ಮಾಡಲಾಗಿದ್ದು ಉಳ್ಳವರಿಗೆ ಶಿಕ್ಷಣವನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ ಹಾಗೂ ಈ ಕುಕೃತ್ಯ ಪೂರ್ವಯೋಜಿತ ಸಂಚು ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಘೋರ ಅನ್ಯಾಯ
ಹಗಲಿರುಳು ಓದಿದ ಬಡ ಮತ್ತು ಮಧ್ಯಮ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಈ ಹಗರಣದಿಂದ ಭಾರಿ ಅನ್ಯಾಯವಾಗಿದೆ. ಅವರು ಇಲ್ಲಿವರೆಗೆ ಪಟ್ಟ ಶ್ರಮ ನೀರಿನಲ್ಲಿ ಹೋಮ ಮಾಡಿದಂತಾಗಿದ್ದು ಸಾವಿರಾರು ವಿದ್ಯಾರ್ಥಿಗಳು ಶಾಕ್ ನಲ್ಲಿದ್ದು ಭ್ರಮನಿರಸನಗೊಂಡಿದ್ದಾರೆ. ಇದಕ್ಕೆ ಮೋದಿ ಸರ್ಕಾರವೇ ನೇರ ಹೊಣೆ ಎಂದು ಪ್ರತಿಭಟನಾಕಾರರು ದೂರಿದರು. “ಶಿಕ್ಷಣ ಕೇವಲ ಉಳ್ಳವರಿಗೆ ಮಾತ್ರ” ಎಂಬಂತಾಗಿದೆ ಕೇಂದ್ರದ ಅಂಧ ನೀತಿ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾಕಾರರಿಂದ ಬಿಜೆಪಿ ಕಚೇರಿಗೆ ಮುತ್ತಿಗೆ ಯತ್ನ
ವಿಜಯಪುರ:ವಿಜಯಪುರದಲ್ಲಿ ದ್ರಾವಿಡ ವಿದ್ಯಾರ್ಥಿ ಪರಿಷತ್ ವತಿಯಿಂದ ತೀವ್ರ ಪ್ರತಿಭಟನೆ ನಡೆಯಿತು. ನಗರದ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ವಿದ್ಯಾರ್ಥಿ ಸಂಘಟನೆಯ ಕಾರ್ಯಕರ್ತರು, ಕೇಂದ್ರ ಸರ್ಕಾರದ ಆಡಳಿತ ನಡೆಸಲು ನಾಲಾಯಕ್ಕು ಎಂದು ತರಾಟೆಗೆ ತೆಗೆದುಕೊಂಡರು.
ವರ್ಷದಿಂದ ಪಟ್ಟ ವಿದ್ಯಾರ್ಥಿಗಳ ಪರಿಶ್ರಮ ವ್ಯರ್ಥವಾಗಿ ಹೋಗಿದೆ. ಇದಕ್ಕೆ ಮೋದಿ ಸರ್ಕಾರ ಕೂಡಲೆ ಉತ್ತರಿಸಬೇಕು. ಈ ಹಗರಣದ ಹಿಂದೆ ದೊಡ್ಡ ಮಟ್ಟದ ಜಾಲವಿದ್ದು,ಕಾಣದ ಕೈಗಳು ಮನೆಹಾಳು ಕೆಲಸ ಮಾಡಿವೆ. ಕೂಡಲೇ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು,” ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ವಿದ್ಯಾರ್ಥಿಗಳ ಆತಂಕ
ವಿದ್ಯಾರ್ಥಿಗಳೀಗೆ ಶಿಕ್ಷಣ ವವ್ಯವಸ್ಥೆಯ ಮೇಲೆ ನಂಬಿಕೆಯೇ ಹೋಗುತ್ತಿದೆ. ಪರೀಕ್ಷಾ ವ್ಯವಸ್ಥೆ ಸಡಿಲವಾಗುತ್ತಿದ್ದು, ಶ್ರಮಪಟ್ಟು ಓದುವ ವಿದ್ಯಾರ್ಥಿಗಳು ಇಂದು ಬೀದಿ ಪಾಲಾಗುವಂತಾಗಿದೆ. ದೇಶದಾದ್ಯಂತ ಕೇಳಿಬರುತ್ತಿರುವ ಈ ಪ್ರಶ್ನೆಪತ್ರಿಕೆ ಸೋರಿಕೆಗೆ ಕೇಂದ್ರ ಸರ್ಕಾರ ಸೂಕ್ತ ಉತ್ತರ ಎಂದು ಪ್ರತಿಭಟನಾಕಾರರು ಕೆಂಡಕಾರಿದರು.
#NEETScam #ExamPaperLeak #YouthCongressProtest #JusticeForStudents #Hosapete #Vijayapura #FreedomNews #EducationCrisis #NTA #CentralGovernment