

ತುಮಕೂರು: ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಯ ತಿಕ್ಕಾಟದ ನಡುವೆ ಈಗ ಗುಬ್ಬಿ ಹಾಗೂ ಚಿಕ್ಕನಾಯಕನಹಳ್ಳಿ ಗಡಿ ಭಾಗದ ರಸ್ತೆ ಕಾಮಗಾರಿ ಬಲಿಯಾಗಿರುವುದು ವಿಪರ್ಯಾಸವೇ ಸರಿ. ಶೇಕಡಾ 75ರಷ್ಟು ಕಾಮಗಾರಿ ಪೂರ್ಣಗೊಂಡಿರುವ ಹಂತದಲ್ಲಿ ಅರಣ್ಯ ಇಲಾಖೆ ನೋಟಿಸ್ ಜಾರಿ ಮಾಡಿ ಕೆಲಸ ಸ್ಥಗಿತಗೊಳಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ರಸ್ತೆ ಕಾಮಗಾರಿ ವಿವರ
ಗುಬ್ಬಿ ಮತ್ತು ಚಿಕ್ಕನಾಯಕನಹಳ್ಳಿ ಗಡಿ ಭಾಗದ ತೀರ್ಥ ರಾಂಪುರ ಮೀಸಲು ಅರಣ್ಯ ಪ್ರದೇಶದ ನಡುವೆ ಹಾದುಹೋಗುವ ಜಿಲ್ಲಾ ಮುಖ್ಯ ರಸ್ತೆಯನ್ನು ಡಾಂಬರ್ನಿಂದ ಸಿಸಿ ರಸ್ತೆಯಾಗಿ ಅಭಿವೃದ್ಧಿಪಡಿಸಲಾಗುತ್ತಿತ್ತು. ಕೊಂಡ್ಲಿ ಕ್ರಾಸ್ನಿಂದ ದೊಡ್ಡರಾಂಪುರ ಗಡಿಯವರೆಗಿನ ಈ ರಸ್ತೆ ಅಭಿವೃದ್ಧಿಗೆ ಗಣಿ ಬಾಧಿತ ಗ್ರಾಮಗಳ ಪುನಶ್ಚೇತನ ಯೋಜನೆಯಡಿ (KMMERC) ಸುಮಾರು 25 ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗಿತ್ತು.
ಅರಣ್ಯ ಇಲಾಖೆಯ ತಕರಾರು ಏನು?
ಕಾಮಗಾರಿ ಮುಕ್ತಾಯದ ಹಂತ ತಲುಪಿದ್ದಾಗ ಎಚ್ಚೆತ್ತುಕೊಂಡಿರುವ ಗುಬ್ಬಿ ಅರಣ್ಯ ಇಲಾಖೆ, ಪಿಡಬ್ಲ್ಯುಡಿ (PWD) ಇಲಾಖೆಗೆ ನೋಟಿಸ್ ನೀಡುವ ಮೂಲಕ ಕಾಮಗಾರಿಯನ್ನು ತಡೆಹಿಡಿದಿದೆ. ಅರಣ್ಯ ಪ್ರದೇಶದ ನಡುವೆ ನಿಯಮ ಉಲ್ಲಂಘಿಸಿ ಕಾಮಗಾರಿ ನಡೆಸಲಾಗುತ್ತಿದೆ ಎಂಬುದು ಇಲಾಖೆಯ ವಾದ. ಆದರೆ, ನೂರಾರು ವರ್ಷಗಳಿಂದ ಸಾರ್ವಜನಿಕರು ಬಳಸುತ್ತಿರುವ ರಸ್ತೆಗೆ ಈಗ ಅಡ್ಡಿಪಡಿಸುತ್ತಿರುವುದು ಎಷ್ಟು ಸರಿ ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ.
ಕಾಮಗಾರಿ ಸ್ಥಗಿತಗೊಂಡಿರುವುದನ್ನು ಖಂಡಿಸಿ ಸ್ಥಳೀಯ ಮುಖಂಡರು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.
ತುರ್ತು ಸೇವೆಗೆ ಅಡ್ಡಿ: ರಸ್ತೆ ಅರ್ಧಕ್ಕೆ ನಿಂತಿರುವುದರಿಂದ ಆಸ್ಪತ್ರೆಗೆ ಹೋಗಲು ಹಾಗೂ ತುರ್ತು ಸಂದರ್ಭಗಳಲ್ಲಿ ಜನಸಾಮಾನ್ಯರು ಸಂಚರಿಸಲು ಆಗುತ್ತಿಲ್ಲ. ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ ಎಂದು ಮಹಿಳೆಯರು ಅಳಲು ತೋಡಿಕೊಂಡಿದ್ದಾರೆ.ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜುಗಳಿಗೆ ಹೋಗಲು ಆಗುತ್ತಿಲ್ಲ.ರೈತರು ಮತ್ತು ವ್ಯಾಪಾರಿಗಳಿಗೆ ಪ್ರಮುಖ ಸಂಪರ್ಕ ಮಾರ್ಗವಾಗಿದ್ದು, ಕಾಮಗಾರಿ ವಿಳಂಬದಿಂದ ದೈನಂದಿನ ಜೀವನ ಅಸ್ತವ್ಯಸ್ತಗೊಂಡಿದೆ.
ಉಗ್ರ ಹೋರಾಟದ ಎಚ್ಚರಿಕೆ
ಅಭಿವೃದ್ಧಿ ಕಾಮಗಾರಿಗೆ ಇಲ್ಲಸಲ್ಲದ ನೋಟಿಸ್ ನೀಡಿ ಸಮಸ್ಯೆ ಸೃಷ್ಟಿಸಲಾಗುತ್ತಿದೆ. ಜಿಲ್ಲಾಡಳಿತ ಕೂಡಲೇ ಮಧ್ಯಪ್ರವೇಶಿಸಿ ಕಾಮಗಾರಿ ಮುಂದುವರಿಸಲು ಅವಕಾಶ ನೀಡಬೇಕು. ಇಲ್ಲವಾದಲ್ಲಿ ಜಿಲ್ಲಾಧಿಕಾರಿ ಕಚೇರಿ ಹಾಗೂ ಅರಣ್ಯ ಇಲಾಖೆ ಎದುರು ಉಗ್ರ ಹೋರಾಟ ನಡೆಸಲಾಗುವುದು” ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.ಒಟ್ಟಾರೆಯಾಗಿ, 25 ಕೋಟಿ ರೂಪಾಯಿ ಸಾರ್ವಜನಿಕ ಹಣದ ಕಾಮಗಾರಿ ಈಗ ಅರಣ್ಯ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆಯ ನಡುವಿನ ಸಮನ್ವಯದ ಕೊರತೆಯಿಂದಾಗಿ ಅತಂತ್ರ ಸ್ಥಿತಿಯಲ್ಲಿದೆ.ಜಿಲ್ಲಾಧಿಕಾರಿಗಳು ಕೂಡಲೆ ಸಮಸ್ಯೆ ಬಗೆಹರಿಸಿ ಕಾಮಗಾರಿ ಪೂರ್ಣಗೊಳಿಸಬೇಕೆಂಬುದು ಸ್ಥಳೀಯರ ಆಗ್ರಹವಾಗಿದೆ.
#Tumakuru #Gubbi #Chikkanayakanahalli #ForestDepartment #RoadWork #PublicProtest #DevelopmentVsEnvironment #KarnatakaNews #BreakingNews #FreedomTV #Infrastructure