gadagಶಿಕ್ಷಣ

ಗದಗ ಹಾಸ್ಟೆಲ್ ದುರಾವಸ್ಥೆ-ವಿದ್ಯಾರ್ಥಿಗಳ ನರಕಯಾತನೆ!

Gadag Hostel Bad facility

ಗದಗ: ಬಡ ವಿದ್ಯಾರ್ಥಿಗಳ ಪಾಲಿಗೆ ಆಸರೆಯಾಗಬೇಕಿದ್ದ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ಗಳು ಅಕ್ಷರಶಃ ನರಕದಂತಾಗಿವೆ. ಗದಗ ನಗರದ ಗಂಗೀಮಡಿಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರಿ ಮೆಟ್ರಿಕ್ ನಂತರದ ಪರಿಶಿಷ್ಟ ಪಂಗಡದ ಬಾಲಕರ ವಸತಿ ನಿಲಯದಲ್ಲಿ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ವಿದ್ಯಾರ್ಥಿಗಳು ಮೂಲಸೌಕರ್ಯಗಳಿಲ್ಲದೆ ಗೋಳಾಡುತ್ತಿದ್ದಾರೆ.

ಹುಳುಹುಪ್ಪಟೆಯಿಂದ ಕೂಡಿದ ದವಸಧಾನ್ಯ, ಮಾಯವಾದ ಮೊಟ್ಟೆ-ಬಾಳೆಹಣ್ಣು!
ಸರ್ಕಾರ ಕೋಟಿ ಕೋಟಿ ಅನುದಾನ ನೀಡುತ್ತಿದ್ದರೂ ಇಲ್ಲಿನ ವಿದ್ಯಾರ್ಥಿಗಳಿಗೆ ಮಾತ್ರ ಹೊಟ್ಟೆತುಂಬಾ ಊಟ ಸಿಗುತ್ತಿಲ್ಲ. ಗೋಧಿ ಮತ್ತು ದವಸಧಾನ್ಯಗಳಲ್ಲಿ ನುಸಿ ತುಂಬಿಕೊಂಡಿದ್ದು, ಕಳಪೆ ತರಕಾರಿಗಳಿಂದಲೇ ಅಡುಗೆ ಮಾಡಲಾಗುತ್ತಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಆಹಾರ ಮೆನುವಿನಲ್ಲಿರುವಂತೆ ಮೊಟ್ಟೆ ಮತ್ತು ಬಾಳೆಹಣ್ಣು ವಿತರಿಸುತ್ತಿಲ್ಲ. ಇದನ್ನು ಪ್ರಶ್ನಿಸಿದರೆ ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕಿ, ಟಾರ್ಗೆಟ್ ಮಾಡಲಾಗುತ್ತಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ.

ಪಾಚಿಗಟ್ಟಿದ ನೀರಿನಿಂದ ಚರ್ಮ ರೋಗದ ಭೀತಿ
ಕುಡಿಯುವ ನೀರಿಗಾಗಿ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ.ಹಾಸ್ಟೆಲ್‌ನಲ್ಲಿರುವ ನೀರಿನ ಟ್ಯಾಂಕ್‌ಗಳು ಪಾಚಿಗಟ್ಟಿದ್ದು,ಗಲೀಜು ನೀರಿನಿಂದಲೇ ಸ್ನಾನ ಮತ್ತು ನಿತ್ಯಕರ್ಮಗಳನ್ನು ಮಾಡುವ ಸ್ಥಿತಿ ಬಂದೊದಗಿದೆ. ಇದರ ಪರಿಣಾಮವಾಗಿ ಹಲವು ವಿದ್ಯಾರ್ಥಿಗಳಿಗೆ ಚರ್ಮದ ಅಲರ್ಜಿ (ತುರಿಕೆ) ಕಾಣಿಸಿಕೊಂಡಿದ್ದು, ನರಳುತ್ತಿದ್ದಾರೆ. ವಿದ್ಯಾರ್ಥಿಗಳು ವಾಸಿಸುವ ಕೊಠಡಿಗಳ ತುಂಬಾ ಧೂಳು ಆವರಿಸಿದ್ದು,ಕಲಿಕೆಗೆ ಅಗತ್ಯವಿರುವ ಕಂಪ್ಯೂಟರ್‌ಗಳು ಸಹ ಧೂಳು ತಿನ್ನುತ್ತಿವೆ.
ಜಿಲ್ಲಾಡಳಿತದ ‘ಕುಂಭಕರ್ಣ’ ನಿದ್ದೆ!
ಜಿಲ್ಲಾ ಮಟ್ಟದ ಅಧಿಕಾರಿಗಳ ಗಮನಕ್ಕೆ ತಂದರೂ ಅವರು ‘ಡೋಂಟ್ ಕೇರ್’ ಎನ್ನುತ್ತಿದ್ದಾರೆ. ಅಧಿಕಾರಿಗಳಿಗೆ ಶಾಸಕರು,ಸಚಿವರು ಅಥವಾ ಜಿಲ್ಲಾಧಿಕಾರಿಗಳ ಭಯವೇ ಇಲ್ಲದಂತಾಗಿದೆ” ಎಂದು ವಿದ್ಯಾರ್ಥಿಗಳು ಕಿಡಿಕಾರಿದ್ದಾರೆ. ಬಡ ಮಕ್ಕಳ ಅನ್ನಕ್ಕೆ ಕನ್ನ ಹಾಕುತ್ತಿರುವ ಅಧಿಕಾರಿಗಳಿಗೆ ಬುದ್ಧಿ ಕಲಿಸುವರು ಯಾರು ಎಂದು ವಿದ್ಯಾರ್ಥಿಗಳು ಪ್ರಶ್ನೆ ಮಾಡುತ್ತಿದ್ದಾರೆ.
ವಿದ್ಯಾರ್ಥಿಗಳ ಆಗ್ರಹ: ತಕ್ಷಣವೇ ಗುಣಮಟ್ಟದ ಆಹಾರ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಒದಗಿಸಬೇಕು.ಪಾಚಿಗಟ್ಟಿದ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸಿ ಒಳ್ಳೆಯ ನೀರನ್ನು ನೀಡಬೇಕು.ಬೆದರಿಕೆ ಹಾಕುವ ಮತ್ತು ಕರ್ತವ್ಯ ಲೋಪ ಎಸಗುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿಗಳು ತಮ್ಮ ಅಳಲು ತೋಡಿಕೊಂಡರು. ಕೂಡಲೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ,
ಕ್ರಮ ಕೈಗೊಳ್ಳಬೇಕಿದೆ.

#GadagHostelScandal #SocialWelfareDepartment #StudentProtest #GadagNews #HostelLife #KarnatakaEducation #CorruptOfficials #FreedomTV #JusticeForStudents #HealthCrisis

Comments (0)

Your email address will not be published. Required fields are marked *

Back to top button