ಕ್ರಿಕೆಟ್ಸುದ್ದಿ

ರನೌಟ್ ತೀರ್ಪು ನೀಡಿದ್ದಕ್ಕೆ ಯುವ ಅಂಪೈರ್ ಚಾಕು ಇರಿದು ಕೊಲೆ..!

ವಿಶಾಖಪಟ್ಟಣ: ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಕ್ರೀಡಾ ಲೋಕವನ್ನೇ ಬೆಚ್ಚಿಬೀಳಿಸುವಂತಹ ಘಟನೆಯೊಂದು ಸಂಭವಿಸಿದ್ದು, ರನೌಟ್ ವಿಚಾರವಾಗಿ ನಡೆದ ಗಲಾಟೆಯಲ್ಲಿ ಅಂಪೈರ್ ಒಬ್ಬರು ಬಲಿಯಾಗಿದ್ದಾರೆ. ಸ್ಥಳೀಯ ಮೈದಾನವೊಂದರಲ್ಲಿ ಮೂರು ತಂಡಗಳ ನಡುವೆ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿದ್ದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ. 21 ವರ್ಷದ ಡೋಲಾ ಅಜಿತ್ ಬಾಬು ಹಾಗೂ ಅವರ ಸ್ನೇಹಿತ ಚಿರಂಜೀವಿ ಅಂಪೈರಿಂಗ್ ಜವಾಬ್ದಾರಿ ನಿರ್ವಹಿಸುತ್ತಿದ್ದರು. ಈ ವೇಳೆ ರನೌಟ್ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ತಂಡಗಳ ಆಟಗಾರರ ನಡುವೆ ತೀವ್ರ ವಾಗ್ವಾದ ಶುರುವಾಗಿದೆ.

ಗಲಾಟೆ ವಿಕೋಪಕ್ಕೆ ಹೋದಾಗ ಅಂಪೈರ್ ಅಜಿತ್ ಬಾಬು ಮತ್ತು ಚಿರಂಜೀವಿ ಅವರು ಪರಿಸ್ಥಿತಿಯನ್ನು ತಿಳಿಗೊಳಿಸಲು ಮಧ್ಯಪ್ರವೇಶಿಸಿದ್ದಾರೆ. ಈ ಸಂದರ್ಭದಲ್ಲಿ ಕಾಂತಾ ಕಿಶೋರ್ ಎಂಬಾತ ತೀವ್ರವಾಗಿ ಕೋಪಗೊಂಡು, ಅಂಪೈರ್‌ಗಳ ಮೇಲೆ ಚಾಕುವಿನಿಂದ ಮನಸೋಇಚ್ಛೆ ಹಲ್ಲೆ ನಡೆಸಿದ್ದಾನೆ. ಈ ಭೀಕರ ದಾಳಿಯಲ್ಲಿ ಅಜಿತ್ ಅವರ ಎದೆಯ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಕೇವಲ ಒಂದು ರನೌಟ್ ತೀರ್ಪಿನ ವಿಚಾರವಾಗಿ ಶುರುವಾದ ಸಣ್ಣ ಜಗಳವು ಯುವ ಅಂಪೈರ್‌ನ ಕೊಲೆಯಲ್ಲಿ ಅಂತ್ಯವಾಗಿರುವುದು ಸಾರ್ವಜನಿಕರಲ್ಲಿ ಆತಂಕ ಮತ್ತು ವಿಷಾದ ಮೂಡಿಸಿದೆ.

Comments (0)

Your email address will not be published. Required fields are marked *

Back to top button