Nationalಸುದ್ದಿ

ಭಾರತದ ನೌಕಾ ಶಕ್ತಿ ಇಮ್ಮಡಿ: ಪರಮಾಣು ಸಾಮರ್ಥ್ಯದ ‘ಐಎನ್‌ಎಸ್ ಅರಿದಮನ್’ ಅಧಿಕೃತವಾಗಿ ಸೇರ್ಪಡೆ!

ಭಾರತೀಯ ನೌಕಾಪಡೆಯು ತನ್ನ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಮಹತ್ವದ ಮೈಲಿಗಲ್ಲು ಸ್ಥಾಪಿಸಿದ್ದು, ದೇಶೀಯವಾಗಿ ನಿರ್ಮಿಸಲಾದ ನ್ಯೂಕ್ಲಿಯರ್ ಸಾಮರ್ಥ್ಯದ 3ನೇ ಜಲಾಂತರ್ಗಾಮಿ ನೌಕೆ ಐಎನ್‌ಎಸ್ ಅರಿದಮನ್ (INS Aridhaman) ಅನ್ನು ಅಧಿಕೃತವಾಗಿ ಸೇವೆಗೆ ಸೇರ್ಪಡೆಗೊಳಿಸಿದೆ. ಇದು ಭಾರತದ ಪರಮಾಣು ತ್ರಿಕೋನ (Nuclear Triad) ಅಂದರೆ ಭೂಮಿ, ಆಕಾಶ ಮತ್ತು ಸಮುದ್ರದ ಮೂಲಕ ಪರಮಾಣು ದಾಳಿ ನಡೆಸುವ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸಿದೆ. ಈಗಾಗಲೇ ನೌಕಾಪಡೆಯ ಸೇವೆ ಸಲ್ಲಿಸುತ್ತಿರುವ ಐಎನ್‌ಎಸ್ ಅರಿಹಂತ್ ಮತ್ತು ಐಎನ್‌ಎಸ್ ಅರಿಘಾಟ್ ನಂತರದ ಮೂರನೇ ಪರಮಾಣು ಚಾಲಿತ ಬ್ಯಾಲಿಸ್ಟಿಕ್ ಕ್ಷಿಪಣಿ ಜಲಾಂತರ್ಗಾಮಿ (SSBN) ಇದಾಗಿದೆ. ಕೇರಳದ ನೌಕಾ ನೆಲೆಯಲ್ಲಿ ನಡೆದ ಈ ಕಾರ್ಯಾರಂಭ ಸಮಾರಂಭದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಭಾಗವಹಿಸಿದ್ದರು ಎನ್ನಲಾಗಿದ್ದು, ಸಮುದ್ರ ಪ್ರಯೋಗಗಳ ಯಶಸ್ವಿ ಮುಕ್ತಾಯದ ನಂತರ ಈ ನೌಕೆಯನ್ನು ನಿಯೋಜಿಸಲಾಗಿದೆ.

ಈ ಜಲಾಂತರ್ಗಾಮಿ ನೌಕೆಯ ಸೇರ್ಪಡೆಯೊಂದಿಗೆ ಅಮೆರಿಕ, ರಷ್ಯಾ, ಯುಕೆ, ಫ್ರಾನ್ಸ್ ಮತ್ತು ಚೀನಾ ರಾಷ್ಟ್ರಗಳ ನಂತರ ಇಂತಹ ಅತ್ಯಾಧುನಿಕ ಯುದ್ಧನೌಕೆಗಳನ್ನು ಹೊಂದಿರುವ ಆಯ್ದ ರಾಷ್ಟ್ರಗಳ ಸಾಲಿಗೆ ಭಾರತವು ಭದ್ರವಾಗಿ ಸೇರ್ಪಡೆಗೊಂಡಿದೆ. ಎಸ್‌ಎಸ್‌ಬಿಎನ್ ಎಂದರೆ ‘ಶಿಪ್ ಸಬ್‌ಮರ್ಸಿಬಲ್ ಬ್ಯಾಲಿಸ್ಟಿಕ್ ನ್ಯೂಕ್ಲಿಯರ್’ ಎಂದರ್ಥವಾಗಿದ್ದು, ಇದು ಸಮುದ್ರದ ಆಳದಿಂದಲೇ ಶತ್ರು ರಾಷ್ಟ್ರಗಳ ಮೇಲೆ ಪರಮಾಣು ದಾಳಿ ನಡೆಸುವ ಅದ್ಭುತ ಶಕ್ತಿಯನ್ನು ಹೊಂದಿದೆ. ಭಾರತವು ಈಗಾಗಲೇ ವಾಯು ಮತ್ತು ಭೂ ಆಧಾರಿತ ಪರಮಾಣು ದಾಳಿ ವ್ಯವಸ್ಥೆಗಳಲ್ಲಿ ಪರಿಣತಿ ಹೊಂದಿದ್ದು, ಈಗ ಸಮುದ್ರದೊಳಗಿನ ತನ್ನ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವತ್ತ ವಿಶೇಷ ಗಮನ ಹರಿಸುತ್ತಿದೆ.

ಭಾರತದ ಮೊದಲ ಸ್ವದೇಶಿ ನಿರ್ಮಿತ ಪರಮಾಣು ಜಲಾಂತರ್ಗಾಮಿ ಐಎನ್‌ಎಸ್ ಅರಿಹಂತ್ ಅನ್ನು 2009 ರಲ್ಲಿ ಸೇರ್ಪಡೆಗೊಳಿಸಿ 2016 ರಲ್ಲಿ ಕಾರ್ಯಾರಂಭ ಮಾಡಲಾಗಿತ್ತು. ನಂತರ 2024 ರ ಆಗಸ್ಟ್‌ನಲ್ಲಿ ಐಎನ್‌ಎಸ್ ಅರಿಘಾಟ್ ಅನ್ನು ಸೇವೆಗೆ ಪಡೆಯಲಾಗಿತ್ತು. ಈಗ ಅರಿದಮನ್ ಸೇರ್ಪಡೆಯು ಹಿಂದೂ ಮಹಾಸಾಗರ ವಲಯದಲ್ಲಿ ಹೆಚ್ಚುತ್ತಿರುವ ಜಾಗತಿಕ ಮತ್ತು ಪ್ರಾದೇಶಿಕ ಭದ್ರತಾ ಸವಾಲುಗಳನ್ನು ಎದುರಿಸಲು ಭಾರತಕ್ಕೆ ಹೊಸ ಚೈತನ್ಯ ನೀಡಿದೆ.

Comments (0)

Your email address will not be published. Required fields are marked *

Back to top button