
ಬೆಂಗಳೂರು: ಬೆಂಗಳೂರಿನಲ್ಲಿ ಬಟ್ಟೆ ವ್ಯಾಪಾರದ ನೆಪದಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ನೈಜೀರಿಯಾ ಮೂಲದ ಸ್ಯಾಮುಯೆಲ್ ಇಕ್ಕೆನಾ ಎಂಬಾತನನ್ನು ಯಲಹಂಕ ಪೊಲೀಸರು ಬಂಧಿಸಿ, ಆತನಿಂದ ಸುಮಾರು 2 ಕೋಟಿ ರೂಪಾಯಿ ಮೌಲ್ಯದ ಎಂಡಿಎಂಎ ಕ್ರಿಸ್ಟಲ್ ಅನ್ನು ಜಪ್ತಿ ಮಾಡಿದ್ದಾರೆ. 2012ರಲ್ಲಿ ಬ್ಯುಸಿನೆಸ್ ವೀಸಾದಡಿ ಭಾರತಕ್ಕೆ ಬಂದಿದ್ದ ಈತ ದೆಹಲಿ ಮತ್ತು ಮುಂಬೈನಲ್ಲಿ ನೆಲೆಸಿದ್ದವನು, ಕಳೆದ ವರ್ಷವಷ್ಟೇ ಬೆಂಗಳೂರಿಗೆ ಬಂದು ಬನ್ನೇರುಘಟ್ಟ ರಸ್ತೆಯಲ್ಲಿ ವಾಸವಿದ್ದನು. ಆರಂಭದಲ್ಲಿ ಬಟ್ಟೆ ವ್ಯಾಪಾರದಲ್ಲಿ ತೊಡಗಿದ್ದ ಈತ ನಂತರ ಮಾದಕ ವಸ್ತುಗಳ ಡೀಲಿಂಗ್ ಆರಂಭಿಸಿದ್ದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ಕಾರ್ಯಾಚರಣೆ ವೇಳೆ ಪೊಲೀಸರು ಬಂಧಿತನಿಂದ 2 ಕೆಜಿ ತೂಕದ ಅಮೂಲ್ಯ ಮಾದಕ ವಸ್ತುವನ್ನು ವಶಕ್ಕೆ ಪಡೆದಿದ್ದು, ಯಲಹಂಕ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಇದೇ ವೇಳೆ ನಗರದ ಭಾರತಿ ನಗರ, ಜಾಲಹಳ್ಳಿ ಮತ್ತು ಪುಲಕೇಶಿ ನಗರ ವ್ಯಾಪ್ತಿಯಲ್ಲಿಯೂ ಪೊಲೀಸರು ಕಾರ್ಯಾಚರಣೆ ನಡೆಸಿ ಲಕ್ಷಾಂತರ ರೂಪಾಯಿ ಮೌಲ್ಯದ ಗಾಂಜಾವನ್ನು ವಶಪಡಿಸಿಕೊಳ್ಳುವ ಮೂಲಕ ಡ್ರಗ್ ದಂಧೆಗೆ ಬ್ರೇಕ್ ಹಾಕಿದ್ದಾರೆ.




