ಹಣ ನೀಡಲು ನಿರಾಕರಿಸಿದ ಕಾರಣ; ಮಂಗಳಮುಖಿಯರ ಮೇಲೆ ಭೀಕರ ಹಲ್ಲೆ

ಮೈಸೂರು: ಮೈಸೂರಿನ ಸಾತಗಳ್ಳಿ ಸಮೀಪದ ಅಮೃತ ಬಡಾವಣೆಯಲ್ಲಿ ಹಣದ ವಿಚಾರವಾಗಿ ಮಂಗಳಮುಖಿಯರ ಮೇಲೆ ಭೀಕರ ಹಲ್ಲೆ ನಡೆದಿರುವ ಘಟನೆ ವರದಿಯಾಗಿದೆ. ಸ್ಥಳೀಯ ನಿವಾಸಿಯಾದ ಆನಮ್ ಎಂಬ ಮಂಗಳಮುಖಿಯ ಬಳಿ ಯುವಕರ ಗುಂಪೊಂದು ತಮ್ಮ ವೈಯಕ್ತಿಕ ಖರ್ಚಿಗೆ ಹಣ ನೀಡುವಂತೆ ಪೀಡಿಸಿದ್ದು, ಇದಕ್ಕೆ ಆನಮ್ ನಿರಾಕರಿಸಿದಾಗ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ತಕ್ಷಣವೇ ಸಹಾಯಕ್ಕಾಗಿ ಆನಮ್ ತನ್ನ ಸ್ನೇಹಿತೆ ಪಾರಿಯವರನ್ನು ಸ್ಥಳಕ್ಕೆ ಕರೆಸಿಕೊಂಡಿದ್ದು, ಈ ಸಂದರ್ಭದಲ್ಲಿ ಆಕ್ರೋಶಗೊಂಡ ಕಿಡಿಗೇಡಿಗಳು ತಲ್ವಾರ್ ಮತ್ತು ಚಾಕುವಿನಿಂದ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಪಾರಿಯವರ ಮುಖಕ್ಕೆ ಚಾಕುವಿನಿಂದ ಇರಿಯಲಾಗಿದ್ದು, ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಭಾನುವಾರ ರಾತ್ರಿ ನಡೆದ ಈ ಕೃತ್ಯದ ಬಗ್ಗೆ ಮೈಸೂರಿನ ದಕ್ಷಿಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕೃತ್ಯವೆಸಗಿ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.




