
ಅಮೆರಿಕ-ಇರಾನ್ ನಡುವಿನ ಸಂಘರ್ಷ ಬಗೆಹರಿಸಲು ಪಾಕಿಸ್ತಾನವು ಮಧ್ಯಸ್ಥಿಕೆವಹಿಸಲು ಸಿದ್ಧವಾಗಿದೆ. ಅಮೆರಿಕ ಮತ್ತು ಇರಾನ್ ನಡುವಿನ ಸಂಭಾವ್ಯ ಮಾತುಕತೆಗಳ ಕುರಿತಾದ ವರದಿಗಳಿಂದ ಯಾವುದೇ ಅಂತಿಮ ನಿರ್ಧಾರಕ್ಕೆ ಬರಬಾರದು ಎಂದು ಶ್ವೇತಭವನ ಹೇಳಿದೆ. ರಾಜತಾಂತ್ರಿಕ ಪ್ರಯತ್ನಗಳು ಸೂಕ್ಷ್ಮವಾಗಿರುತ್ತವೆ ಎಂದು ಹೇಳಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ನಡುವಿನ ಮಾತುಕತೆಗಳನ್ನು ದೃಢಪಡಿಸಿದೆ.
ಅಮೆರಿಕದ ಹಿರಿಯ ಅಧಿಕಾರಿಗಳು ಇಸ್ಲಾಮಾಬಾದ್‌ನಲ್ಲಿ ಇರಾನಿನ ಪ್ರತಿನಿಧಿಗಳನ್ನು ಭೇಟಿ ಮಾಡಬಹುದು ಎಂಬ ವರದಿಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್, ಸಭೆ ಕುರಿತಾದ ಊಹಾಪೋಹಗಳನ್ನು ನಾವು ಔಪಚಾರಿಕವಾಗಿ ಘೋಷಿಸುವವರೆಗೆ ಅದು ಸತ್ಯವೆಂದು ಪರಿಗಣಿಸಬಾರದು ಎಂದು ಹೇಳಿದ್ದಾರೆ.
ರಾಯಿಟರ್ಸ್ ಪ್ರಕಾರ, ಪಾಕಿಸ್ತಾನದ ಅಧಿಕಾರಿಯೊಬ್ಬರು ಮತ್ತು ಎರಡನೇ ಮೂಲವೊಂದು ಯುದ್ಧವನ್ನು ಕೊನೆಗೊಳಿಸುವ ಗುರಿಯನ್ನು ಹೊಂದಿರುವ ನೇರ ಮಾತುಕತೆಗಳು ಈ ವಾರದ ಆರಂಭದಲ್ಲಿ ಇಸ್ಲಾಮಾಬಾದ್‌ನಲ್ಲಿ ನಡೆಯಬಹುದು.
ಟ್ರಂಪ್ ಹಾಗೂ ಮುನೀರ್ ನಡುವಿನ ಮಾತುಕತೆ ಬಳಿಕ, ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್, ಶಾಂತಿ ಕಾರ್ಯಾಚರಣೆಗಳ ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ ಮತ್ತು ಉದ್ಯಮಿ ಜೇರೆಡ್ ಕುಶ್ನರ್ ಅವರು ಪಾಕಿಸ್ತಾನದ ರಾಜಧಾನಿಯಲ್ಲಿ ಇರಾನಿನ ಅಧಿಕಾರಿಗಳನ್ನು ಭೇಟಿ ಮಾಡುವ ನಿರೀಕ್ಷೆಯಿದೆ.
ಅಮೆರಿಕ ಹಾಗೂ ಇರಾನ್ ನಡುವೆ ಉತ್ತಮ ಮಾತುಕತೆಗಳು ನಡೆದಿವೆ. ಕೆಲವು ವಿಷಯಗಳಲ್ಲಿ ಒಪ್ಪಂದವಾಗುವ ಸಾಧ್ಯತೆ ಕೂಡ ಇದೆ ಎಂದು ಟ್ರಂಪ್ ಹೇಳಿದ್ದಾರೆ. ಈ ಕಾರಣದಿಂದಲೇ ದಾಳಿಗಳನ್ನು ಐದು ದಿನಗಳ ಕಾಲ ನಿಲ್ಲಿಸುವ ನಿರ್ಧಾರ ಮಾಡಿದ್ದೇವೆ. ಮಾತುಕತೆಗಳು ವಿಫಲವಾದರೆ ದಾಳಿಗಳು ಮತ್ತೆ ಆರಂಭವಾಗುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.




