Sports

ಸಂಜಯ್ ಬಂಗಾರ್ ಪುತ್ರಿ ಅನಯಾ ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆ ಯಶಸ್ವಿ!

ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಮತ್ತು ಮಾಜಿ ಕೋಚ್ ಸಂಜಯ್ ಬಂಗಾರ್ ಅವರ ಪುತ್ರಿ ಅನಯಾ ಬಂಗಾರ್ (ಹಿಂದಿನ ಹೆಸರು ಆರ್ಯನ್), ತಮ್ಮ ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಪೂರೈಸಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಈ ಸುದೀರ್ಘ ಪಯಣವು ತಮಗೆ ಮತ್ತು ತಮ್ಮ ಕುಟುಂಬಕ್ಕೆ ಸುಲಭವಾಗಿರಲಿಲ್ಲ ಎಂದು ಭಾವನಾತ್ಮಕವಾಗಿ ಬರೆದುಕೊಂಡಿರುವ ಅನಯಾ, ಅಂತಿಮವಾಗಿ ತಮ್ಮ ಅಸ್ಮಿತೆಯನ್ನು ಕಂಡುಕೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

ಈ ಬದಲಾವಣೆಯ ಹಂತದಲ್ಲಿ ಕುಟುಂಬದ ಬೆಂಬಲದ ಬಗ್ಗೆ ಮಾತನಾಡಿರುವ ಅವರು, “ನನ್ನನ್ನು ಅರ್ಥಮಾಡಿಕೊಳ್ಳಲು ಮತ್ತು ಒಪ್ಪಿಕೊಳ್ಳಲು ಸಮಯ ಬೇಕಾಯಿತು. ಇದು ತಕ್ಷಣಕ್ಕೆ ಸಂಭವಿಸಿದ ಬದಲಾವಣೆಯಲ್ಲ, ನಮ್ಮೆಲ್ಲರಲ್ಲೂ ಅನೇಕ ಪ್ರಶ್ನೆಗಳು ಮತ್ತು ಗೊಂದಲಗಳಿದ್ದವು. ಆದರೆ ಇಂದು ನನ್ನ ತಂದೆ ನನ್ನ ಬೆಂಬಲಕ್ಕೆ ನಿಂತಿರುವುದು ನನಗೆ ಎಲ್ಲವೂ ಸಿಕ್ಕಂತಿದೆ,” ಎಂದು ಕೃತಜ್ಞತೆ ಸಲ್ಲಿಸಿದ್ದಾರೆ. ವಿಶೇಷವೆಂದರೆ, ಈ ಶಸ್ತ್ರಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ತಂದೆ ಸಂಜಯ್ ಬಂಗಾರ್ ಅವರೇ ಭರಿಸುವ ಮೂಲಕ ಮಗಳ ನಿರ್ಧಾರಕ್ಕೆ ಸಾಥ್ ನೀಡಿದ್ದಾರೆ.

ಅನಯಾ ಕೂಡ ತಂದೆಯಂತೆಯೇ ಕ್ರಿಕೆಟ್‌ನಲ್ಲಿ ಅಪಾರ ಆಸಕ್ತಿ ಹೊಂದಿದ್ದು, ಕ್ಲಬ್ ಮಟ್ಟದಲ್ಲಿ ಆಟಗಾರರಾಗಿ ಗುರುತಿಸಿಕೊಂಡಿದ್ದರು. ಆದರೆ, ಹಾರ್ಮೋನ್ ರಿಪ್ಲೇಸ್‌ಮೆಂಟ್ ಥೆರಪಿ ) ಮತ್ತು ಲಿಂಗ ಬದಲಾವಣೆಯ ನಂತರ ಕ್ರೀಡಾ ನಿಯಮಗಳ ಕಾರಣದಿಂದಾಗಿ ಅವರಿಗೆ ಕ್ರಿಕೆಟ್ ಆಡಲು ಅವಕಾಶ ಸಿಗುತ್ತಿಲ್ಲ. “ಕ್ರಿಕೆಟ್ ಲೋಕದಲ್ಲಿ ನಿನಗೆ ಜಾಗವಿಲ್ಲ” ಎಂದು ಸ್ವತಃ ತಂದೆಯೇ ಹೇಳಿದಾಗ ತೀವ್ರ ನೋವು ಅನುಭವಿಸಿದ್ದಾಗಿ ತಿಳಿಸಿರುವ ಅವರು, ಅನಿವಾರ್ಯವಾಗಿ ತಮ್ಮ ನೆಚ್ಚಿನ ಕ್ರೀಡೆಯನ್ನು ತ್ಯಾಗ ಮಾಡಬೇಕಾಯಿತು ಎಂದಿದ್ದಾರೆ.

ಪ್ರಸ್ತುತ ಅನಯಾ ಬಂಗಾರ್ ಅವರು ತಮ್ಮ ಹಾರ್ಮೋನ್ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆಯ ನಂತರ ಹೊಸ ಜೀವನ ಆರಂಭಿಸಿದ್ದು, ಟ್ರಾನ್ಸ್ ಜನರ ಹಕ್ಕುಗಳ ಪರವಾಗಿ ಧ್ವನಿ ಎತ್ತುತ್ತಿದ್ದಾರೆ. ಬದಲಾವಣೆಗೆ ಸಮಯ ಬೇಕು ಮತ್ತು ಆ ಬದಲಾವಣೆಯನ್ನು ಪ್ರೀತಿಯಿಂದ ಒಪ್ಪಿಕೊಂಡಾಗ ಎಲ್ಲದಕ್ಕೂ ಬೆಲೆ ಬರುತ್ತದೆ ಎಂದು ಸಮಾಜಕ್ಕೆ ಸಂದೇಶ ನೀಡಿದ್ದಾರೆ.

Comments (0)

Your email address will not be published. Required fields are marked *

Back to top button