ಧುರಂಧರ್’ ಸಿನಿಮಾ ನಿಷೇಧಕ್ಕೆ ವಿಪಕ್ಷಗಳ ಒತ್ತಾಯ!

ಬಾಲಿವುಡ್ ಅಂಗಳದಲ್ಲಿ ಸಂಚಲನ ಮೂಡಿಸಿರುವ ‘ಧುರಂಧರ್, ದಿ ರಿವೆಂಜ್’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದ್ದರೂ, ರಾಜಕೀಯ ವಲಯದಲ್ಲಿ ತೀವ್ರ ವಿವಾದದ ಕಿಡಿ ಹೊತ್ತಿಸಿದೆ. ನಟ ರಣವೀರ್ ಸಿಂಗ್ ಅಭಿನಯದ ಈ ಸ್ಪೈ ಥ್ರಿಲ್ಲರ್ ಚಿತ್ರವನ್ನು ‘ಪ್ರೊಪಗಾಂಡಾ’ ಅಥವಾ ಅಜೆಂಡಾ ಪ್ರೇರಿತ ಸಿನಿಮಾ ಎಂದು ಹಲವರು ಟೀಕಿಸುತ್ತಿದ್ದಾರೆ. ಎಐಎಂಐಎಂ ವಕ್ತಾರ ವಾರಿಸ್ ಪಠಾಣ್ ಈ ಚಿತ್ರವನ್ನು ತೀವ್ರವಾಗಿ ಖಂಡಿಸಿದ್ದು, ಭಾರತದಲ್ಲಿ ದ್ವೇಷ ಹರಡುವ ಉದ್ದೇಶದಿಂದಲೇ ಇಂತಹ ಸುಳ್ಳು ಕಥೆಗಳನ್ನು ಸಿನಿಮಾ ಮಾಡಲಾಗುತ್ತಿದೆ ಎಂದು ಆರೋಪಿಸಿಸರ್ಕಾರ ಕೂಡಲೇ ಇದನ್ನು ನಿಷೇಧಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಸಂಸದ ತಾರಿಕ್ ಅನ್ವರ್ ಕೂಡ ಚಿತ್ರದ ವಿರುದ್ಧ ದನಿ ಎತ್ತಿದ್ದು, ಇದು ಸಮಾಜದಲ್ಲಿ ಕೋಮು ವಿಭಜನೆಯನ್ನು ಸೃಷ್ಟಿಸುವ ವ್ಯವಸ್ಥಿತ ಪ್ರಯತ್ನದ ಭಾಗವಾಗಿದೆ ಎಂದು ಟೀಕಿಸಿದ್ದಾರೆ. ಈ ಸಿನಿಮಾವನ್ನು ನಿರ್ಮಿಸಿದವರು ಮೂಲತಃ ದ್ವೇಷ ಹರಡುವ ಗುತ್ತಿಗೆ ಪಡೆದವರಂತೆ ವರ್ತಿಸುತ್ತಿದ್ದಾರೆ ಮತ್ತು ಇದು ಆಡಳಿತಾರೂಢ ಬಿಜೆಪಿಯ ಸೈದ್ಧಾಂತಿಕ ಅಜೆಂಡಾವನ್ನು ಪ್ರಚಾರ ಮಾಡಲು ತಯಾರಾದ ಚಿತ್ರವಾಗಿದೆ ಎಂದು ಅವರು ಗಂಭೀರವಾಗಿ ಆರೋಪಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಮಾಜಿ ಡಿಜಿಪಿ ಎಸ್.ಪಿ. ವೈದ್ ಅವರು ಚಿತ್ರದ ಪರವಾಗಿ ಬ್ಯಾಟ್ ಬೀಸಿದ್ದಾರೆ. ಸಿನಿಮಾದಲ್ಲಿ ತೋರಿಸಲಾಗಿರುವ ವಿಷಯಗಳು ಕಹಿಯಾಗಿದ್ದರೂ ಅವು ಸತ್ಯ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ. ಗ್ಯಾಂಗ್ಸ್ಟರ್ ಅತೀಕ್ ಅಹ್ಮದ್ನ ಪಾಕಿಸ್ತಾನದೊಂದಿಗಿನ ನಂಟು ಮತ್ತು ಅಕ್ರಮ ಶಸ್ತ್ರಾಸ್ತ್ರ ವ್ಯವಹಾರ ಇಡೀ ಜಗತ್ತಿಗೆ ತಿಳಿದಿರುವ ವಿಚಾರವಾಗಿದ್ದು, ಸಿನಿಮಾದಲ್ಲಿ ವಾಸ್ತವವನ್ನೇ ಬಿಂಬಿಸಲಾಗಿದೆ ಎಂದು ಅವರು ವಿಪಕ್ಷಗಳ ಟೀಕೆಗೆ ತಿರುಗೇಟು ನೀಡಿದ್ದಾರೆ. ಸತ್ಯವನ್ನು ಜೀರ್ಣಿಸಿಕೊಳ್ಳಲಾಗದವರು ಮಾತ್ರ ಇಂತಹ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂಬುದು ಅವರ ಅಭಿಪ್ರಾಯವಾಗಿದೆ.
ರಾಜಕೀಯ ಕೆಸರೆರಚಾಟದ ನಡುವೆಯೂ ಆದಿತ್ಯ ಧರ್ ನಿರ್ದೇಶನದ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಅಜೇಯವಾಗಿ ಮುನ್ನುಗ್ಗುತ್ತಿದೆ. ಮೊದಲ ದಿನವೇ 146 ಕೋಟಿ ರೂಪಾಯಿಗಳ ಭರ್ಜರಿ ಓಪನಿಂಗ್ ಪಡೆದಿದ್ದ ಈ ಚಿತ್ರ, ಎರಡನೇ ದಿನವೂ ಸುಮಾರು 75 ಕೋಟಿ ರೂಪಾಯಿಗಳನ್ನು ಬಾಚಿಕೊಂಡಿದೆ.




