ಕರಾವಳಿಯಾದ್ಯಂತ ರಂಜಾನ್ ಸಂಭ್ರಮ; ಮಂಗಳೂರು ಈದ್ಗಾದಲ್ಲಿ ಯು.ಟಿ. ಖಾದರ್!

ಕರಾವಳಿ ಜಿಲ್ಲೆಗಳಾದ್ಯಂತ ಇಂದು ಈದ್-ಉಲ್-ಫಿತ್ರ್ ಹಬ್ಬವನ್ನು ಅತ್ಯಂತ ಸಂಭ್ರಮ ಮತ್ತು ಸೌಹಾರ್ದತೆಯಿಂದ ಆಚರಿಸಲಾಯಿತು. ಮಂಗಳೂರಿನ ಬಾವುಟಗುಡ್ಡೆಯ ಐತಿಹಾಸಿಕ ಈದ್ಗಾ ಮಸೀದಿಯಲ್ಲಿ ಸಾವಿರಾರು ಮುಸ್ಲಿಂ ಬಾಂಧವರು ಒಟ್ಟಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಹಬ್ಬದ ಸಡಗರಕ್ಕೆ ಸಾಕ್ಷಿಯಾದರು.
ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಅವರು ಈ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಎಲ್ಲರಿಗೂ ಹಬ್ಬದ ಶುಭಾಶಯ ಕೋರಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಪ್ರೀತಿ, ವಿಶ್ವಾಸ ಮತ್ತು ಸೋದರತೆಯೇ ಈ ಹಬ್ಬದ ಮುಖ್ಯ ಸಂದೇಶವಾಗಿದೆ. ಅಭಿವೃದ್ಧಿಯ ಕರ್ನಾಟಕ ಮತ್ತು ಬಲಿಷ್ಠ ಭಾರತ ನಿರ್ಮಾಣ ಮಾಡುವುದು ನಮ್ಮೆಲ್ಲರ ಉದ್ದೇಶವಾಗಬೇಕು. ಇತರ ಧರ್ಮದವರೊಂದಿಗೆ ಬೆರೆತು ಹಬ್ಬ ಆಚರಿಸುವುದೇ ನಮ್ಮ ನಾಡಿನ ವಿಶೇಷತೆ” ಎಂದು ಸೌಹಾರ್ದತೆಯ ಮಂತ್ರ ಜಪಿಸಿದರು.
ಉಡುಪಿ ಜಿಲ್ಲೆಯಾದ್ಯಂತ ಕೂಡ ರಂಜಾನ್ ಸಂಭ್ರಮ ಮನೆಮಾಡಿದ್ದು, ಉಡುಪಿ ನಗರ, ಕಾಪು, ಕುಂದಾಪುರ ಸೇರಿದಂತೆ ವಿವಿಧ ತಾಲ್ಲೂಕುಗಳ ಮಸೀದಿಗಳಲ್ಲಿ ವಿಶೇಷ ನಮಾಜ್ ನೆರವೇರಿಸಲಾಯಿತು. ಮುಸ್ಲಿಂ ಬಾಂಧವರು ಹೊಸ ಬಟ್ಟೆ ಧರಿಸಿ, ಹಸಿದವರಿಗೆ ‘ಫಿತರ್ ಝಕಾತ್’ ನೀಡುವ ಮೂಲಕ ಹಬ್ಬದ ಸಾರ್ಥಕತೆಯನ್ನು ಮೆರೆದರು. ಕೆಲವು ಮಸೀದಿಗಳಲ್ಲಿ ಮಹಿಳೆಯರಿಗೂ ನಮಾಜ್ ನಿರ್ವಹಿಸಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿತ್ತು.
ಉಡುಪಿಯ ದೊಡ್ಡಣಗುಡ್ಡೆ ಮಸೀದಿಯ ಖತೀಬರಾದ ಖಾಸಿಂ ಸಅದಿ ಅವರು ಈದ್ ಸಂದೇಶ ನೀಡಿ, “ರಂಜಾನ್ ಮಾಸದಲ್ಲಿ ನಾವು ಕಲಿತ ಶಿಸ್ತು ಮತ್ತು ಸಂಯಮ ಜೀವನದುದ್ದಕ್ಕೂ ಇರಲಿ. ಬಡವರ ಕಣ್ಣೀರು ಒರೆಸುವುದು ಮತ್ತು ನೆರೆಹೊರೆಯವರೊಂದಿಗೆ ಪ್ರೀತಿಯಿಂದ ವರ್ತಿಸುವುದು ನಮ್ಮ ಕರ್ತವ್ಯ. ಅನಾಚಾರ ಅಥವಾ ದುಂದುವೆಚ್ಚಕ್ಕೆ ಅವಕಾಶ ನೀಡದೆ ಶರೀಅತ್ ಚೌಕಟ್ಟಿನಲ್ಲಿ ಸಂಭ್ರಮಿಸೋಣ” ಎಂದು ಕರೆ ನೀಡಿದರು. ಕರಾವಳಿಯಲ್ಲಿ ಇಂದು ಹಬ್ಬ ಆಚರಿಸಲಾಗಿದ್ದು, ರಾಜ್ಯದ ಇತರೆಡೆಗಳಲ್ಲಿ ನಾಳೆ ರಂಜಾನ್ ಸಡಗರ ಮನೆಮಾಡಲಿದೆ.