Freedom TV

ಹಬ್ಬದ ಸೀಸನ್‌ನಲ್ಲಿ ಕೆಎಸ್‌ಆರ್‌ಟಿಸಿ ಬಿಗ್ ಆಫರ್; 2000 ವಿಶೇಷ ಬಸ್‌ಗಳ ಸಂಚಾರ!

ಬೆಂಗಳೂರಿನಲ್ಲಿ ನೆಲೆಸಿರುವ ಪರವೂರಿನ ಮಂದಿಗೆ ಯುಗಾದಿ ಹಾಗೂ ರಂಜಾನ್ ಹಬ್ಬದ ಸಂಭ್ರಮದ ಜೊತೆಗೆ ಕೆಎಸ್‌ಆರ್‌ಟಿಸಿ ಸಿಹಿ ಸುದ್ದಿಯೊಂದನ್ನು ನೀಡಿದೆ. ಹಬ್ಬದ ಪ್ರಯುಕ್ತ ಊರುಗಳಿಗೆ ತೆರಳುವ ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲು ಸಾರಿಗೆ ಸಂಸ್ಥೆಯು ಒಟ್ಟು 2000 ವಿಶೇಷ ಬಸ್‌ಗಳನ್ನು ರಸ್ತೆಗಿಳಿಸಲು ನಿರ್ಧರಿಸಿದೆ. ಮಾರ್ಚ್ 18 ರಿಂದ 20 ರವರೆಗೆ ಬೆಂಗಳೂರಿನಿಂದ ವಿವಿಧ ಜಿಲ್ಲೆಗಳಿಗೆ ಹಾಗೂ ಮಾರ್ಚ್ 22 ರಂದು ಮರಳಿ ಬೆಂಗಳೂರಿಗೆ ಬರಲು ಈ ವಿಶೇಷ ಬಸ್‌ಗಳ ಸೌಲಭ್ಯ ಲಭ್ಯವಿರಲಿದೆ.

ಈ ವಿಶೇಷ ಬಸ್‌ಗಳು ಬೆಂಗಳೂರಿನ ಕೆಂಪೇಗೌಡ ಬಸ್‌ ನಿಲ್ದಾಣ ಹಾಗೂ ಮೈಸೂರು ರಸ್ತೆ ಬಸ್‌ ನಿಲ್ದಾಣಗಳಿಂದ ಪ್ರಮುಖವಾಗಿ ಸಂಚರಿಸಲಿವೆ. ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶಿವಮೊಗ್ಗ, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರಗಿ ಹಾಗೂ ಮೈಸೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಿಗೆ ಬಸ್‌ ವ್ಯವಸ್ಥೆ ಮಾಡಲಾಗಿದೆ. ಅಷ್ಟೇ ಅಲ್ಲದೆ, ನೆರೆಯ ರಾಜ್ಯಗಳಾದ ತಿರುಪತಿ, ಹೈದರಾಬಾದ್ ಮತ್ತು ವಿಜಯವಾಡಕ್ಕೂ ವಿಶೇಷ ಬಸ್‌ಗಳು ಸಂಚರಿಸಲಿವೆ.

ಪ್ರಯಾಣಿಕರು ಕೆಎಸ್‌ಆರ್‌ಟಿಸಿಯ ಅಧಿಕೃತ ವೆಬ್‌ಸೈಟ್ ಮೂಲಕ ಸುಲಭವಾಗಿ ಇ-ಟಿಕೆಟ್ ಕಾಯ್ದಿರಿಸಬಹುದಾಗಿದೆ. ಟಿಕೆಟ್ ಬುಕಿಂಗ್‌ನಲ್ಲಿ ಸಾರಿಗೆ ಸಂಸ್ಥೆಯು ಆಕರ್ಷಕ ರಿಯಾಯಿತಿಗಳನ್ನು ಘೋಷಿಸಿದ್ದು, ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಟಿಕೆಟ್ ಕಾಯ್ದಿರಿಸಿದಲ್ಲಿ ಶೇ. 5 ರಷ್ಟು ರಿಯಾಯಿತಿ ದೊರೆಯಲಿದೆ. ಅಲ್ಲದೆ, ಹೋಗುವ ಮತ್ತು ಬರುವ ಪ್ರಯಾಣದ ಟಿಕೆಟ್‌ಗಳನ್ನು ಒಟ್ಟಿಗೆ ಬುಕ್ ಮಾಡಿದರೆ ವಾಪಸ್ ಬರುವ ದರದಲ್ಲಿ ಶೇ. 10 ರಷ್ಟು ರಿಯಾಯಿತಿ ಸಿಗಲಿದೆ.

ಲಾಂಗ್ ವೀಕೆಂಡ್ ಇರುವುದರಿಂದ ಪ್ರವಾಸಿ ತಾಣಗಳಿಗೂ ಹೆಚ್ಚಿನ ಜನರು ತೆರಳುವ ಸಾಧ್ಯತೆ ಇದೆ. ಆದ್ದರಿಂದ ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ಹೆಚ್ಚುವರಿ ಬಸ್‌ಗಳನ್ನು ಬಿಡಲು ಸಾರಿಗೆ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ.

Comments (0)

Your email address will not be published. Required fields are marked *

Back to top button