ಪತ್ನಿಯ ನಿಂದನೆ ಸಹಿಸದೆ ಮಹಿಳೆಗೆ ಕಪಾಳಮೋಕ್ಷ ಮಾಡಿದ ಯುವಕ!

Indian Railway Viral News: ರೈಲು ಪ್ರಯಾಣದಲ್ಲಿ ಸೀಟಿಗಾಗಿ ನಡೆಯುವ ಜಗಳಗಳು ಸಾಮಾನ್ಯ, ಆದರೆ ಬಿಹಾರದ ರೈಲೊಂದರ ಜನರಲ್ ಬೋಗಿಯಲ್ಲಿ ನಡೆದ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ತನ್ನನ್ನು ಚಪ್ಪಲಿಯಿಂದ ಬೆದರಿಸಿದಾಗಲೂ ಸುಮ್ಮನಿದ್ದ ಯುವಕ, ತನ್ನ ಪತ್ನಿಯ ಬಗ್ಗೆ ಹಗುರವಾಗಿ ಮಾತನಾಡಿದ ಮಹಿಳೆಗೆ ರೈಲಿನಲ್ಲೇ ಧರ್ಮದೇಟು ನೀಡಿದ್ದಾನೆ.
ಘಟನೆಯ ಹಿನ್ನೆಲೆ:
ವರದಿಗಳ ಪ್ರಕಾರ, ಕಿಕ್ಕಿರಿದು ತುಂಬಿದ್ದ ಜನರಲ್ ಬೋಗಿಯಲ್ಲಿ ಕಿಟಕಿ ಪಕ್ಕದ ಸೀಟಿಗಾಗಿ ಮಹಿಳೆ ಮತ್ತು ಯುವಕನ ನಡುವೆ ವಾಗ್ವಾದ ಆರಂಭವಾಯಿತು. ಮಹಿಳೆ ತನ್ನ ಮಗಳೊಂದಿಗೆ ಪ್ರಯಾಣಿಸುತ್ತಿದ್ದರೆ, ಯುವಕ ಪತ್ನಿಯೊಂದಿಗೆ ಅದೇ ಸೀಟಿನ ಕೊನೆಯಲ್ಲಿ ಕುಳಿತಿದ್ದನು. ಜನದಟ್ಟಣೆಯಿಂದ ಉಂಟಾದ ಅಸಹನೆ ಅಂತಿಮವಾಗಿ ವಿಕೋಪಕ್ಕೆ ತಿರುಗಿತು.
ಜಗಳದ ವೇಳೆ ಮಹಿಳೆ ಕೈಯಲ್ಲಿ ಚಪ್ಪಲಿ ಹಿಡಿದು ಯುವಕನಿಗೆ ಬೆದರಿಕೆ ಹಾಕಿದ್ದಾಳೆ. “ನನ್ನ ಮಗ ಬೆಂಗಳೂರಿನಲ್ಲಿ ಇಂಜಿನಿಯರ್, ಪತಿ ಸೂಪರ್ ವೈಸರ್” ಎಂದು ತನ್ನ ಕೌಟುಂಬಿಕ ಹಿನ್ನೆಲೆ ಹೇಳುತ್ತಾ ಅಹಂಕಾರ ಪ್ರದರ್ಶಿಸಿದ್ದಾಳೆ.
ಯುವಕನ ಪತ್ನಿ ಜಗಳ ಬಿಡಿಸಲು ಬಂದಾಗ, ಮಹಿಳೆ ಆಕೆಯ ಕೈಹಿಡಿದು ಎಳೆದಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಳೆ. ತನ್ನ ಪತ್ನಿಯ ಬಗ್ಗೆ ಅತ್ಯಂತ ಹಗುರವಾಗಿ ಮಾತನಾಡಿದ್ದನ್ನು ಸಹಿಸದ ಯುವಕ, ತಾಳ್ಮೆ ಕಳೆದುಕೊಂಡು ಮಹಿಳೆಗೆ ಸತತವಾಗಿ ಕಪಾಳಮೋಕ್ಷ ಮಾಡಿದ್ದಾನೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಎರಡು ಗುಂಪುಗಳಾಗಿದ್ದಾರೆ. “ಪತ್ನಿಗೆ ಅವಮಾನವಾದಾಗ ಯುವಕ ಮಾಡಿದ್ದು ಸರಿ” ಎಂದು ಕೆಲವರು ಬೆಂಬಲಿಸಿದರೆ, “ಕಾರಣ ಏನೇ ಇರಲಿ ಮಹಿಳೆಯ ಮೇಲೆ ಕೈ ಮಾಡಿದ್ದು ತಪ್ಪು” ಎಂದು ಇನ್ನು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಸದ್ಯಕ್ಕೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲವಾದರೂ, ಈ ಘಟನೆಯು ರೈಲು ಪ್ರಯಾಣಿಕರ ಮಾನಸಿಕ ಒತ್ತಡ ಮತ್ತು ಜನರಲ್ ಬೋಗಿಗಳ ದುಸ್ಥಿತಿಗೆ ಕನ್ನಡಿ ಹಿಡಿದಂತಿದೆ.




