Top Newsಸುದ್ದಿ

ಜೈಲುಗಳಲ್ಲಿ ‘ಡ್ರಗ್ಸ್ ಮುಕ್ತ’ ಅಭಿಯಾನ; ಕೈದಿಗಳ ಮನಃಪರಿವರ್ತನೆಗೆ ಹೊಸ ಹೆಜ್ಜೆ!

ಬೆಂಗಳೂರು: ರಾಜ್ಯದ ಕಾರಾಗೃಹಗಳಲ್ಲಿ ಮಾದಕ ವಸ್ತುಗಳ ಬಳಕೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಕಾರಾಗೃಹ ಇಲಾಖೆಯು ಅತ್ಯಂತ ಕಟ್ಟುನಿಟ್ಟಿನ ಮತ್ತು ಸುಧಾರಣಾ ಕ್ರಮಗಳನ್ನು ಕೈಗೊಂಡಿದೆ. ಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಜಾರಿಗೆ ಬರುತ್ತಿರುವ ಈ ಯೋಜನೆಯು, ಕೇವಲ ಶಿಕ್ಷೆಯನ್ನಷ್ಟೇ ನೀಡದೆ ಕೈದಿಗಳ ಮನಃಪರಿವರ್ತನೆಗೆ ಒತ್ತು ನೀಡುತ್ತಿದೆ. ಇತ್ತೀಚೆಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಿಬ್ಬಂದಿಯೇ ಮಾದಕ ವಸ್ತುಗಳನ್ನು ಸಾಗಿಸಲು ಯತ್ನಿಸಿದ ಘಟನೆಯ ಬೆನ್ನಲ್ಲೇ, ಜೈಲುಗಳ ಒಳಗಿನ ಭದ್ರತೆ ಮತ್ತು ಕೈದಿಗಳ ಆರೋಗ್ಯದ ಮೇಲೆ ನಿಗಾ ಇಡಲು ವಿಶೇಷ ಕಾರ್ಯಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ.

ಈ ಯೋಜನೆಯ ಪ್ರಮುಖ ಭಾಗವಾಗಿ ನಿಮ್ಹಾನ್ಸ್ ಆಸ್ಪತ್ರೆಯ ತಾಂತ್ರಿಕ ಸಹಯೋಗದೊಂದಿಗೆ ರಾಜ್ಯದ ಎಲ್ಲಾ ಜೈಲುಗಳಲ್ಲಿ ಕೈದಿಗಳಿಗೆ ಡ್ರಗ್ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಮೊದಲ ಹಂತದಲ್ಲಿ ಪ್ರತಿ ಜೈಲಿನ ಶೇಕಡಾ 10ರಷ್ಟು ಕೈದಿಗಳನ್ನು ಲಾಟರಿ ಮಾದರಿಯಲ್ಲಿ ಆಯ್ಕೆ ಮಾಡಿ, ಅವರಿಗೆ ಗಾಂಜಾ, ಹೆರೊಯಿನ್ ಮತ್ತು ಕೊಕೈನ್ ಸೇರಿದಂತೆ ವಿವಿಧ ಮಾದಕ ದ್ರವ್ಯಗಳ ಸೇವನೆಯ ಪರೀಕ್ಷೆ ಮಾಡಲಾಗುತ್ತಿದೆ. ಜೈಲು ವೈದ್ಯಾಧಿಕಾರಿಗಳಿಗೆ ಒದಗಿಸಲಾದ ವಿಶೇಷ ಕಿಟ್‌ಗಳ ಮೂಲಕ ಈ ತಪಾಸಣೆ ನಡೆಯುತ್ತಿದ್ದು, ಜೈಲಿನೊಳಗೆ ಮಾದಕ ವಸ್ತುಗಳ ಜಾಲವನ್ನು ಬೇರುಸಹಿತ ಕಿತ್ತೆಸೆಯುವುದು ಇಲಾಖೆಯ ಮುಖ್ಯ ಗುರಿಯಾಗಿದೆ.

ಈ ಪರೀಕ್ಷೆಯಲ್ಲಿ ಮಾದಕ ವಸ್ತು ಸೇವಿಸಿರುವುದು ದೃಢಪಟ್ಟ ಕೈದಿಗಳ ಮೇಲೆ ತಕ್ಷಣಕ್ಕೆ ಯಾವುದೇ ಹೊಸ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸದಿರಲು ಇಲಾಖೆ ನಿರ್ಧರಿಸಿದೆ. ಬದಲಿಗೆ, ಅವರನ್ನು ವ್ಯಸನ ಮುಕ್ತರನ್ನಾಗಿ ಮಾಡಲು ವೈಜ್ಞಾನಿಕ ಕೌನ್ಸೆಲಿಂಗ್ ಮತ್ತು ಅಗತ್ಯವಿದ್ದಲ್ಲಿ ಆಸ್ಪತ್ರೆಗಳಲ್ಲಿ ದಾಖಲಿಸಿ ಸುಧಾರಿತ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗಿದೆ.

Comments (0)

Your email address will not be published. Required fields are marked *

Back to top button