ರಾಜಕೀಯರಾಜ್ಯಸುದ್ದಿ

ಸಂಪುಟ ಪುನರ್‌ರಚನೆ ಚರ್ಚೆಯ ನಡುವೆ ಸಿದ್ದರಾಮಯ್ಯ ಡಿನ್ನರ್ ಪಾರ್ಟಿ!

ಕರ್ನಾಟಕ ರಾಜಕಾರಣದಲ್ಲಿ ಸದ್ಯ ‘ಡಿನ್ನರ್ ಪಾಲಿಟಿಕ್ಸ್’ ಭಾರೀ ಸದ್ದು ಮಾಡುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಚ್ 16ರಂದು ಸಚಿವರಿಗಾಗಿ ಆಯೋಜಿಸಿರುವ ವಿಶೇಷ ಔತಣಕೂಟ ತೀವ್ರ ಕುತೂಹಲ ಕೆರಳಿಸಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇತ್ತೀಚೆಗಷ್ಟೇ ಔತಣಕೂಟ ಏರ್ಪಡಿಸಿದ ಬೆನ್ನಲ್ಲೇ ಮುಖ್ಯಮಂತ್ರಿಗಳು ತಮ್ಮ ಸರ್ಕಾರಿ ನಿವಾಸ ‘ಕಾವೇರಿ’ಯಲ್ಲಿ ಈ ಸಭೆ ಕರೆದಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಕೆಪಿಸಿಸಿ ಅಧ್ಯಕ್ಷರಾಗಿ ಆರು ವರ್ಷ ಪೂರ್ಣಗೊಳಿಸಿದ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ನಡೆಸಿದ ಡಿನ್ನರ್ ಮೀಟಿಂಗ್ ನಂತರ, ಉಭಯ ನಾಯಕರ ಬಣಗಳಿಗೆ ಸೇರಿದ ಶಾಸಕರು ಪ್ರತ್ಯೇಕ ಸಭೆಗಳನ್ನು ನಡೆಸಿರುವುದು ಪಕ್ಷದೊಳಗೆ ಸಂಚಲನ ಮೂಡಿಸಿತ್ತು. ವಿಶೇಷವಾಗಿ ಸಚಿವ ಸ್ಥಾನದ ಆಕಾಂಕ್ಷಿಗಳು ಸಂಪುಟ ಪುನರ್‌ರಚನೆಗಾಗಿ ಒತ್ತಡ ಹೇರುತ್ತಿರುವ ಈ ಸಮಯದಲ್ಲಿ, ಸಿದ್ದರಾಮಯ್ಯ ಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಈ ಔತಣಕೂಟವನ್ನು ವೇದಿಕೆಯನ್ನಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗ್ತಿದೆ . ಇದು ಕೇವಲ ಸೌಜನ್ಯದ ಕೂಟವೋ ಅಥವಾ ಅಧಿಕಾರ ಹಂಚಿಕೆಯ ತಂತ್ರಗಾರಿಕೆಯೋ ಎಂಬ ಚರ್ಚೆ ಶುರುವಾಗಿದೆ.

ಈ ಪ್ರಮುಖ ಡಿನ್ನರ್ ಸಭೆಯಲ್ಲಿ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು, ಜಿಬಿಎ ಚುನಾವಣೆಗಳ ಸಿದ್ಧತೆ ಹಾಗೂ ಅತ್ಯಂತ ಸಂವೇದನಾಶೀಲ ವಿಷಯವಾದ ಒಳಮೀಸಲಾತಿ ಜಾರಿ ಕುರಿತು ಗಂಭೀರ ಚರ್ಚೆಗಳು ನಡೆಯುವ ಸಾಧ್ಯತೆ ಇದೆ. ಇದರೊಂದಿಗೆ ಶೀಘ್ರದಲ್ಲೇ ಘೋಷಣೆಯಾಗಲಿರುವ ಪಂಚ ರಾಜ್ಯಗಳ ಚುನಾವಣಾ ಪ್ರಚಾರದಲ್ಲಿ ರಾಜ್ಯದ ನಾಯಕರ ಪಾತ್ರದ ಬಗ್ಗೆಯೂ ಸಿಎಂ ಸೂಚನೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ಒಟ್ಟಾರೆಯಾಗಿ, ಕಾಂಗ್ರೆಸ್ ಪಾಳಯದಲ್ಲಿ ನಡೆಯುತ್ತಿರುವ ಈ ಸರಣಿ ಔತಣಕೂಟಗಳು ರಾಜ್ಯ ರಾಜಕಾರಣದ ಮುಂದಿನ ದಿಕ್ಕನ್ನು ನಿರ್ಧರಿಸುವ ಮುನ್ಸೂಚನೆ ನೀಡುತ್ತಿವೆ.

Comments (0)

Your email address will not be published. Required fields are marked *

Back to top button