ಮಕ್ಕಳಿಗಾಗಿ ವಾಟ್ಸಾಪ್ ಹೊಸ ಪ್ಲಾನ್; ಪೋಷಕರ ಕಂಟ್ರೋಲ್‌ನಲ್ಲೇ ಮೆಸೇಜಿಂಗ್ !

ಮೆಟಾ ಒಡೆತನದ ಪ್ರಖ್ಯಾತ ಸಂದೇಶ ರವಾನೆ ಅಪ್ಲಿಕೇಶನ್ ವಾಟ್ಸಾಪ್, 13 ವರ್ಷದೊಳಗಿನ ಮಕ್ಕಳಿಗಾಗಿ ಹೊಸ ಸುರಕ್ಷಿತ ಫೀಚರ್ ಪರಿಚಯಿಸುವುದಾಗಿ ಘೋಷಿಸಿದೆ. ಜಾಗತಿಕವಾಗಿ ಸಾಮಾಜಿಕ ಜಾಲತಾಣಗಳು ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಬೀರುತ್ತಿರುವ ದುಷ್ಪರಿಣಾಮಗಳ ಬಗ್ಗೆ ಕಳವಳ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ, ಪೋಷಕರ ಸಂಪೂರ್ಣ ನಿಯಂತ್ರಣವಿರುವ ವಿಶೇಷ ಖಾತೆಗಳನ್ನು ತೆರೆಯಲು ವಾಟ್ಸಾಪ್ ಈಗ ಅವಕಾಶ ನೀಡುತ್ತಿದೆ.
ಈ ಹೊಸ ಮಾದರಿಯ ಖಾತೆಗಳು ಕಟ್ಟುನಿಟ್ಟಾದ ಡಿಫಾಲ್ಟ್ ಸೆಟ್ಟಿಂಗ್‌ಗಳನ್ನು ಹೊಂದಿರಲಿದ್ದು, ಪೋಷಕರು ತಮ್ಮ ಮಕ್ಕಳ ಮೊದಲ ಮೆಸೇಜಿಂಗ್ ಅನುಭವವನ್ನು ಸುರಕ್ಷಿತವಾಗಿ ಮಾರ್ಗದರ್ಶನ ಮಾಡಲು ಇಲ್ಲಿ ಅವಕಾಶವಿದೆ. ಮುಖ್ಯವಾಗಿ, ಈ ಖಾತೆಯನ್ನು ಪೋಷಕರು ಅಥವಾ ಪಾಲಕರೇ ನಿಯಂತ್ರಿಸಲಿದ್ದು, ಮಗುವನ್ನು ಯಾರು ಸಂಪರ್ಕಿಸಬಹುದು ಮತ್ತು ಮಗು ಯಾವ ಗ್ರೂಪ್‌ಗಳನ್ನು ಸೇರಬಹುದು ಎಂಬುದನ್ನು ಅವರೇ ನಿರ್ಧರಿಸಲಿದ್ದಾರೆ. ಇದು ಅಪರಿಚಿತರಿಂದ ಬರಬಹುದಾದ ಅಪಾಯಗಳನ್ನು ತಡೆಯಲು ಸಹಕಾರಿಯಾಗಲಿದೆ.
ಅಪರಿಚಿತ ಸಂಪರ್ಕಗಳಿಂದ ಬರುವ ಮೆಸೇಜ್ ರಿಕ್ವೆಸ್ಟ್‌ಗಳನ್ನು ಪೋಷಕರೇ ಪರಿಶೀಲಿಸಬಹುದು ಮತ್ತು ಖಾತೆಯ ಗೌಪ್ಯತೆ ಸೆಟ್ಟಿಂಗ್‌ಗಳನ್ನು ಅವರೇ ನಿರ್ವಹಿಸಬಹುದು. ಇತ್ತೀಚಿನ ದಿನಗಳಲ್ಲಿ ಹ್ಯಾಕಿಂಗ್ ಮತ್ತು ವೈಯಕ್ತಿಕ ಮಾಹಿತಿ ಸೋರಿಕೆಯಂತಹ ಸೈಬರ್ ಅಪರಾಧಗಳು ಹೆಚ್ಚಾಗುತ್ತಿರುವುದರಿಂದ, ಮಕ್ಕಳಿಗೆ ತಾಂತ್ರಿಕ ಭದ್ರತೆ ಒದಗಿಸುವುದು ಈ ಉಪಕ್ರಮದ ಮುಖ್ಯ ಉದ್ದೇಶವಾಗಿದೆ.
ಆಸ್ಟ್ರೇಲಿಯಾದಂತಹ ದೇಶಗಳು ಈಗಾಗಲೇ ಹದಿಹರೆಯದವರ ಮೇಲೆ ಸಾಮಾಜಿಕ ಜಾಲತಾಣಗಳ ಬಳಕೆಯನ್ನು ನಿಷೇಧಿಸುವಂತಹ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿವೆ. ಈ ಜಾಗತಿಕ ಬೆಳವಣಿಗೆಗಳ ನಡುವೆ, ವಾಟ್ಸಾಪ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಿರುವುದು ಗಮನಾರ್ಹವಾಗಿದೆ.




