ವಿಶೇಷವೈರಲ್ ನ್ಯೂಸ್

ಜಾಗ್ರತೆ! ನಿಮ್ಮ ಕನಸುಗಳಿಗೂ ಲಗ್ಗೆ ಇಟ್ಟಿದೆ ಮಾರ್ಕೆಟಿಂಗ್ ಮಾಫಿಯಾ

ಮಾನವನ ಅತ್ಯಂತ ವೈಯಕ್ತಿಕ ಕ್ಷಣಗಳಾದ ನಿದ್ರೆ ಮತ್ತು ಕನಸುಗಳ ಮೇಲೂ ಕಾರ್ಪೊರೇಟ್ ಜಗತ್ತು ಕಣ್ಣಿಟ್ಟಿದ್ದು, ಅಸಾಧಾರಣ ಹಾಗೂ ವಿವಾದಾತ್ಮಕ ಪ್ರಯತ್ನಗಳಿಗೆ ಕೈಹಾಕಿದೆ. ಮಾರುಕಟ್ಟೆ ಮಾಫಿಯಾ ಎಷ್ಟು ಪ್ರಬಲವಾಗಿದೆಯೆಂದರೆ, ನಿಮ್ಮ ನಿದ್ರೆಯ ಅವಧಿಯನ್ನೂ ಲಾಭಕ್ಕೆ ಬಳಸಿಕೊಳ್ಳಲು ಸಂಚು ರೂಪಿಸುತ್ತಿದೆ. ಅಮೆರಿಕದ ಪ್ರಖ್ಯಾತ ಬಿಯರ್ ಕಂಪನಿಯೊಂದು ‘ಡ್ರೀಮ್ ಆಡ್’ ಎಂಬ ಹೊಸ ಪ್ರಯೋಗಕ್ಕೆ ಮುಂದಾಗಿದ್ದು, ಜನರು ನಿದ್ರೆಯಲ್ಲೂ ತಮ್ಮ ಉತ್ಪನ್ನಗಳ ಬಗ್ಗೆ ಕನಸು ಕಾಣುವಂತೆ ಪ್ರೇರೇಪಿಸುತ್ತಿದೆ. ಜಲಪಾತ ಮತ್ತು ಪರ್ವತಗಳ ಮನಮೋಹಕ ದೃಶ್ಯಗಳ ಮೂಲಕ ಮೆದುಳನ್ನು ‘ಪ್ರೋಗ್ರಾಮಿಂಗ್’ ಮಾಡಿ, ಕನಸಿನ ಲೋಕದಲ್ಲೂ ಜಾಹೀರಾತು ಮೂಡಿಸುವ ಈ ಪ್ರಯತ್ನವು ಜನಸಾಮಾನ್ಯರಲ್ಲಿ ಆತಂಕ ಮೂಡಿಸಿದೆ.

ಕಾರ್ಪೊರೇಟ್ ಕಂಪನಿಗಳ ಈ ನಡೆಯ ವಿರುದ್ಧ ಹಾರ್ವರ್ಡ್ ವಿಶ್ವವಿದ್ಯಾಲಯದ ಖ್ಯಾತ ವಿಜ್ಞಾನಿಗಳು ಮತ್ತು ಸಂಶೋಧಕರು ಕೆಂಡಾಮಂಡಲವಾಗಿದ್ದಾರೆ. “ವೈಯಕ್ತಿಕ ಜೀವನದ ಕೊನೆಯ ಕೋಟೆಯಾಗಿರುವ ನಿದ್ರೆಯನ್ನಾದರೂ ನಮಗೆ ಬಿಟ್ಟುಬಿಡಿ” ಎಂದು ಸಂಶೋಧಕ ಸ್ಟಿಕ್‌ಗೋಲ್ಡ್ ಸೇರಿದಂತೆ ಹಲವು ತಜ್ಞರು ಬಹಿರಂಗ ಪತ್ರದ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಕನಸುಗಳನ್ನು ವ್ಯಾಪಾರಕ್ಕೆ ಬಳಸಿಕೊಳ್ಳುವುದು ನೈತಿಕವಾಗಿ ಸರಿಯಲ್ಲ ಎಂದು ಪ್ರತಿಪಾದಿಸುತ್ತಿದ್ದಾರೆ. ಕನಸಿನ ಮೇಲೆ ಇಂತಹ ಕೃತಕ ಜಾಹೀರಾತುಗಳ ಪ್ರಭಾವ ಸದ್ಯಕ್ಕೆ ಕಡಿಮೆ ಇರಬಹುದು ಎಂದು ಕೆಲವು ತಜ್ಞರು ಹೇಳುತ್ತಿದ್ದರೂ, ದೊಡ್ಡ ಕಂಪನಿಗಳು ಈ ಬಗ್ಗೆ ಕೇಳಲಾದ ಪ್ರಶ್ನೆಗಳಿಗೆ ಮೌನ ವಹಿಸಿರುವುದು ಅನುಮಾನಗಳನ್ನು ದಟ್ಟವಾಗಿಸಿದೆ.

ಇದೇ ತಂತ್ರಜ್ಞಾನವನ್ನು ಧನಾತ್ಮಕವಾಗಿ ಬಳಸಿಕೊಳ್ಳಲು ‘ಡ್ರೀಮ್ ಇಂಜಿನಿಯರಿಂಗ್’ ಎಂಬ ಅದ್ಭುತ ಪರಿಕಲ್ಪನೆಯು ಮುನ್ನೆಲೆಗೆ ಬರುತ್ತಿದೆ. ನಮಗೆ ಬೇಕಾದ ಕನಸುಗಳನ್ನು ನಾವೇ ಡಿಸೈನ್ ಮಾಡಿಕೊಳ್ಳುವ ಅಥವಾ ನಿಯಂತ್ರಿಸುವ ಮಾಸ್ಟರ್ ಪ್ಲಾನ್ ಇದಾಗಿದೆ. ನಿದ್ರೆಗೆ ಜಾರುವ ಮುನ್ನ ಮೆದುಳಿಗೆ ಆಡಿಯೋ ಸಂದೇಶಗಳನ್ನು ರವಾನಿಸುವ ‘ಡ್ರೀಮ್ ಇನ್ಕ್ಯುಬೇಷನ್’ ತಂತ್ರದ ಮೂಲಕ ಆಲೋಚನೆಗಳನ್ನು ಪ್ರೋಗ್ರಾಮಿಂಗ್ ಮಾಡಬಹುದು. ಈಗಾಗಲೇ ‘ಡೋರ್ಮಿಯೊ’ ಎಂಬ ವಿಶೇಷ ಸಾಧನದ ಮೂಲಕ ಶೇ. 70ರಷ್ಟು ಜನರಲ್ಲಿ ಈ ಪ್ರಯೋಗ ಯಶಸ್ವಿಯಾಗಿದ್ದು, ಕನಸಿನಲ್ಲೇ ಕವಿತೆ ಬರೆಯುವ ಅಥವಾ ಹೊಸ ಸೃಜನಶೀಲ ಲೋಕವನ್ನೇ ಸೃಷ್ಟಿಸುವ ಸಾಧ್ಯತೆಗಳು ತೆರೆದುಕೊಂಡಿವೆ.

ಕನಸುಗಳು ಕೇವಲ ವ್ಯಾಪಾರಕ್ಕಷ್ಟೇ ಅಲ್ಲ, ಮಾನಸಿಕ ಆರೋಗ್ಯದ ದೃಷ್ಟಿಯಿಂದಲೂ ಸಂಜೀವಿನಿಯಾಗಬಲ್ಲವು ಎಂದು ವಿಜ್ಞಾನಿಗಳು ನಂಬಿದ್ದಾರೆ. ಭೀಕರ ಪೀಡಕ ಕನಸುಗಳಿಂದ ಮುಕ್ತಿ ಪಡೆಯಲು, ಖಿನ್ನತೆ ಮತ್ತು ಆತಂಕವನ್ನು ದೂರ ಮಾಡಲು ಈ ಡ್ರೀಮ್ ಇಂಜಿನಿಯರಿಂಗ್ ತಂತ್ರಜ್ಞಾನವು ವರದಾನವಾಗಲಿದೆ. ಶಸ್ತ್ರಚಿಕಿತ್ಸೆಯ ನಂತರದ ತೀವ್ರ ನೋವನ್ನು ಮರೆಯಲು ಸಹ ಈ ತಂತ್ರಜ್ಞಾನವನ್ನು ಬಳಸಬಹುದಾಗಿದ್ದು, ಭವಿಷ್ಯದಲ್ಲಿ ಪ್ರತ್ಯೇಕ ‘ಡ್ರೀಮ್ ಕ್ಲಿನಿಕ್’ಗಳು ಆರಂಭವಾಗುವ ಸಾಧ್ಯತೆಯಿದೆ. ಒಟ್ಟಾರೆಯಾಗಿ, ಕನಸಿನ ಲೋಕವು ಈಗ ವಿಜ್ಞಾನ ಮತ್ತು ವ್ಯಾಪಾರದ ನಡುವಿನ ಕುತೂಹಲಕಾರಿ ಯುದ್ಧಭೂಮಿಯಾಗಿ ಮಾರ್ಪಟ್ಟಿದೆ.

Comments (0)

Your email address will not be published. Required fields are marked *

Back to top button