ಜಿಲ್ಲೆಸುದ್ದಿ

ಬೆಂಗಳೂರು ಪೊಲೀಸರ ಮೆಗಾ ಆಪರೇಷನ್; 200ಕ್ಕೂ ಹೆಚ್ಚು ಅಕ್ರಮ ವಿದೇಶಿಗರಿಗೆ ‘ಗೇಟ್ ಪಾಸ್’!

ಬೆಂಗಳೂರು: ನಗರದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳ ವಿರುದ್ಧ ಪೊಲೀಸ್ ಇಲಾಖೆ ಸಮರ ಸಾರಿದ್ದು, ಬೃಹತ್ ಕಾರ್ಯಾಚರಣೆಯ ಮೂಲಕ 200ಕ್ಕೂ ಹೆಚ್ಚು ಮಂದಿಗೆ ‘ಗೇಟ್ ಪಾಸ್’ ನೀಡಲು ಸಜ್ಜಾಗಿದೆ. ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ನೇತೃತ್ವದಲ್ಲಿ ನಡೆದ ಈ ವಿಶೇಷ ತಪಾಸಣೆಯಲ್ಲಿ ಸಿಸಿಬಿ ಅಧಿಕಾರಿಗಳು ಹಾಗೂ ನಗರದ 11 ಡಿಸಿಪಿ ವ್ಯಾಪ್ತಿಯ ಪೊಲೀಸ್ ಸಿಬ್ಬಂದಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಕಳೆದ ಒಂದು ವಾರದಿಂದ ನಿರಂತರವಾಗಿ ನಡೆದ ಈ ಕಾರ್ಯಾಚರಣೆಯು ಅಕ್ರಮ ವಲಸಿಗರ ಪಾಲಿಗೆ ಸಿಂಹಸ್ವಪ್ನವಾಗಿ ಪರಿಣಮಿಸಿದೆ.

ನಗರದ ವಿವಿಧ ಭಾಗಗಳಲ್ಲಿ ಅಕ್ರಮವಾಗಿ ತಂಗಿದ್ದ ವಿದೇಶಿಗರನ್ನು ಪತ್ತೆಹಚ್ಚಲಾಗಿದ್ದು, ಇವರಲ್ಲಿ ಬಹುಪಾಲು ಮಂದಿ ಬಾಂಗ್ಲಾದೇಶ ಮತ್ತು ಆಫ್ರಿಕಾ ಮೂಲದವರಾಗಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಯಾವುದೇ ಅಧಿಕೃತ ದಾಖಲೆಗಳಿಲ್ಲದೆ ಅಥವಾ ವೀಸಾ ಅವಧಿ ಮುಗಿದಿದ್ದರೂ ನಗರದಲ್ಲೇ ಬೀಡುಬಿಟ್ಟಿದ್ದ ನೂರಾರು ಪ್ರಜೆಗಳನ್ನು ಒಂದೇ ದಿನದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಶಕ್ಕೆ ಪಡೆಯಲಾದ 200ಕ್ಕೂ ಹೆಚ್ಚು ವಿದೇಶಿ ಪ್ರಜೆಗಳನ್ನು ಸದ್ಯ ವಿದೇಶಿ ಪ್ರಾದೇಶಿಕ ನೋಂದಣಿ ಕಚೇರಿಯ ಅಧಿಕಾರಿಗಳ ಸುಪರ್ದಿಗೆ ಒಪ್ಪಿಸಲಾಗಿದೆ. ಇವರ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳುವ ಪ್ರಕ್ರಿಯೆ ಆರಂಭವಾಗಿದ್ದು, ಇವರನ್ನು ತಮ್ಮ ದೇಶಗಳಿಗೆ ಗಡಿಪಾರು ಮಾಡುವ ಸಾಧ್ಯತೆಗಳಿವೆ. ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಮತ್ತು ನಗರದ ಕಾನೂನು ಸುವ್ಯವಸ್ಥೆ ಕಾಪಾಡಲು ಇಂತಹ ಕಾರ್ಯಾಚರಣೆಗಳು ಮುಂದಿನ ದಿನಗಳಲ್ಲೂ ಮುಂದುವರಿಯಲಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Comments (0)

Your email address will not be published. Required fields are marked *

Back to top button