
ಬೆಂಗಳೂರು: “ಉತ್ತಮ ಕಲಿಕೆ ಉಜ್ವಲ ಭವಿಷ್ಯ” ಎಂಬ ಧ್ಯೇಯದೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಲಾ ಶಿಕ್ಷಣ ಇಲಾಖೆಗೆ ಭರ್ಜರಿ ಕೊಡುಗೆಗಳನ್ನು ಘೋಷಿಸಿದ್ದಾರೆ. ಸರ್ಕಾರಿ ಶಾಲೆಗಳ ಬಲವರ್ಧನೆಗೆ ಒತ್ತು ನೀಡಿರುವ ಸರ್ಕಾರ, ಬರೋಬ್ಬರಿ 15,000 ಬೋಧಕ ಹುದ್ದೆಗಳನ್ನು ಭರ್ತಿ ಮಾಡಲು ತೀರ್ಮಾನಿಸಿದೆ. ಅಷ್ಟೇ ಅಲ್ಲದೆ, ರಾಜ್ಯದ 800 ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳನ್ನಾಗಿ (KPS) ಉನ್ನತೀಕರಿಸಲು ಮುಂದಿನ ಮೂರು ವರ್ಷಗಳಲ್ಲಿ 3,900 ಕೋಟಿ ರೂ. ವೆಚ್ಚ ಮಾಡಲಾಗುವುದು ಎಂದು ಪ್ರಕಟಿಸಿದ್ದಾರೆ.
ಬಜೆಟ್ನ ಪ್ರಮುಖ ಮುಖ್ಯಾಂಶಗಳು:
- ಬೃಹತ್ ನೇಮಕಾತಿ: ಶಾಲಾ-ಕಾಲೇಜುಗಳಲ್ಲಿ ಖಾಲಿ ಇರುವ 15,000 ಶಿಕ್ಷಕ ಮತ್ತು ಉಪನ್ಯಾಸಕರ ಹುದ್ದೆಗಳ ಭರ್ತಿಗೆ ಆದೇಶ!
- ಡಿಜಿಟಲ್ ಟ್ಯೂಟರ್: 8 ರಿಂದ 12ನೇ ತರಗತಿಯ 12.28 ಲಕ್ಷ ವಿದ್ಯಾರ್ಥಿಗಳಿಗೆ AI ತಂತ್ರಜ್ಞಾನದ ಮೂಲಕ ವೈಯಕ್ತಿಕ ಸ್ವಯಂ-ಕಲಿಕಾ ಡಿಜಿಟಲ್ ಟ್ಯೂಟರ್ ಸೌಲಭ್ಯ.
- ಸೋಶಿಯಲ್ ಮೀಡಿಯಾ ನಿಷೇಧ: ಮೊಬೈಲ್ ಚಟಕ್ಕೆ ಬ್ರೇಕ್ ಹಾಕಲು 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ನಿಷೇಧ ಮಾಡಲು ಕಟ್ಟುನಿಟ್ಟಿನ ನಿರ್ಧಾರ.
- ಉಚಿತ ಪಠ್ಯಪುಸ್ತಕ ವಿಸ್ತರಣೆ: ಇನ್ಮುಂದೆ ಪಿಯುಸಿ ವಿದ್ಯಾರ್ಥಿಗಳಿಗೂ ಉಚಿತ ಪಠ್ಯಪುಸ್ತಕ ವಿತರಣೆ; ಪೂರ್ವ ಪ್ರಾಥಮಿಕ ಮಕ್ಕಳಿಗೆ ಚಟುವಟಿಕೆ ಪುಸ್ತಕ ಲಭ್ಯ.
- ಮೂಲಸೌಕರ್ಯಕ್ಕೆ ಕೋಟಿ ಕೋಟಿ: ಹೊಸ ಕೊಠಡಿ ಮತ್ತು ದುರಸ್ತಿಗೆ 565 ಕೋಟಿ ರೂ. ಹಾಗೂ ಶಾಲಾ ಶೌಚಾಲಯಗಳಿಗಾಗಿ 75 ಕೋಟಿ ರೂ. ಅನುದಾನ.
- ಮಾನಸಿಕ ಆರೋಗ್ಯ: ವಿದ್ಯಾರ್ಥಿಗಳ ಒತ್ತಡ ನಿವಾರಿಸಲು 204 BRC ಕೇಂದ್ರಗಳಲ್ಲಿ ಮಾನಸಿಕ ಆರೋಗ್ಯ ಸಲಹೆಗಾರರ (Counselors) ನೇಮಕ.
- ಇಂಗ್ಲಿಷ್ ತರಬೇತಿ: ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ತರಗತಿ ನಡೆಸಲು ಶಿಕ್ಷಕರಿಗೆ ಇಂಗ್ಲಿಷ್ ಭಾಷಾ ತರಬೇತಿ ನೀಡಲು 24 ಕೋಟಿ ರೂ. ಮೀಸಲು.
- ಶಾಲಾ ಉನ್ನತೀಕರಣ: 184 ಪ್ರಾಥಮಿಕ ಶಾಲೆಗಳು ಪ್ರೌಢಶಾಲೆಗಳಾಗಿ ಹಾಗೂ 50 ಪ್ರೌಢಶಾಲೆಗಳು ಪಿಯು ಕಾಲೇಜುಗಳಾಗಿ ಮೇಲ್ದರ್ಜೆಗೆ.



