
ಬೆಂಗಳೂರು: ರಾಜ್ಯದ ರೈತರಿಗೆ ಆರ್ಥಿಕ ಶಕ್ತಿ ತುಂಬಲು ಸಿಎಂ ಸಿದ್ದರಾಮಯ್ಯ ಅವರು ಸಹಕಾರ ಇಲಾಖೆಯ ಮೂಲಕ ಬೃಹತ್ ಸಾಲದ ಯೋಜನೆಯನ್ನು ಪ್ರಕಟಿಸಿದ್ದಾರೆ. ಈ ಬಾರಿ ಶೂನ್ಯ ಬಡ್ಡಿ ದರದಲ್ಲಿ ದಾಖಲೆಯ 30,000 ಕೋಟಿ ರೂ. ಕೃಷಿ ಸಾಲ ವಿತರಿಸುವ ಗುರಿ ಹೊಂದಲಾಗಿದೆ. ಇದರೊಂದಿಗೆ ಎಪಿಎಂಸಿ ಮತ್ತು ಸಹಕಾರ ಸಂಘಗಳಲ್ಲಿ ಪಾರದರ್ಶಕತೆ ತರಲು ಸಂಪೂರ್ಣ ಡಿಜಿಟಲೀಕರಣಕ್ಕೆ ಸರ್ಕಾರ ಮುಂದಾಗಿದೆ.
ಬಜೆಟ್‌ನ ಪ್ರಮುಖ ಮುಖ್ಯಾಂಶಗಳು:
- ಬಡ್ಡಿರಹಿತ ಸಾಲದ ಬಂಪರ್: ಪ್ರಸಕ್ತ ಸಾಲಿನಲ್ಲಿ 38 ಲಕ್ಷ ರೈತರಿಗೆ 30,000 ಕೋಟಿ ರೂ. ಶೂನ್ಯ ಬಡ್ಡಿ ದರದ ಕೃಷಿ ಸಾಲ ವಿತರಣೆಯ ಗುರಿ!
- ಯಶಸ್ವಿನಿ ಯೋಜನೆ: ಈವರೆಗೆ 86,253 ಫಲಾನುಭವಿಗಳಿಗೆ ಉಚಿತ ಚಿಕಿತ್ಸೆ ನೀಡಲಾಗಿದ್ದು, ಇದಕ್ಕಾಗಿ 163 ಕೋಟಿ ರೂ. ಪಾವತಿ ಮಾಡಲಾಗಿದೆ.
- ಸಹಕಾರ ಸಂಘಗಳ ಡಿಜಿಟಲೀಕರಣ: ಬಾಕಿ ಇರುವ 1,628 ಕೃಷಿ ಪತ್ತಿನ ಸಹಕಾರ ಸಂಘಗಳನ್ನು (PACS) ಈ ವರ್ಷ ಸಂಪೂರ್ಣವಾಗಿ ಗಣಕೀಕರಣಗೊಳಿಸಲು ನಿರ್ಧಾರ.
- ಮೆಕ್ಕೆಜೋಳ ಬೆಳೆಗಾರರಿಗೆ ನೆರವು: ಬೆಲೆ ಕುಸಿತದಿಂದ ಕಂಗಾಲಾದ ರೈತರ ಹಿತರಕ್ಷಣೆಗೆ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ 100 ಕೋಟಿ ರೂ. ಆರ್ಥಿಕ ಸಹಾಯ.
- ಹೊಸ ಜಿಲ್ಲಾ ಬ್ಯಾಂಕ್‌ಗಳು: ನಬಾರ್ಡ್ ಸಲಹೆಯಂತೆ ಪ್ರತಿ ಜಿಲ್ಲೆಯಲ್ಲೂ ‘ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್’ ಸ್ಥಾಪಿಸಲು ಆರ್‌ಬಿಐಗೆ ಪ್ರಸ್ತಾವನೆ ಸಲ್ಲಿಕೆ.
- ವಾಣಿಜ್ಯ ಸಂಕೀರ್ಣಗಳ ನಿರ್ಮಾಣ: ಮೈಸೂರಿನ ಬಂಬೂ ಬಜಾರ್ ಮತ್ತು ಹುಬ್ಬಳ್ಳಿಯ ಕಾಟನ್ ಮಾರ್ಕೆಟ್‌ನಲ್ಲಿ ಪಿಪಿಪಿ ಮಾದರಿಯಲ್ಲಿ ಬೃಹತ್ ವಾಣಿಜ್ಯ ಸಂಕೀರ್ಣಗಳ ನಿರ್ಮಾಣ.
- APMC ಹೈಟೆಕ್ ಸ್ಪರ್ಶ: ಕೃಷಿ ಮಾರುಕಟ್ಟೆ ಸಮಿತಿಗಳ ಕಾರ್ಯಚಟುವಟಿಕೆ ಡಿಜಿಟಲೀಕರಣಕ್ಕೆ 10 ಕೋಟಿ ರೂ. ವೆಚ್ಚದಲ್ಲಿ ERP ವ್ಯವಸ್ಥೆ ಜಾರಿ.



